×
Ad

ಕಾರ್ಪೊರೇಟರ್ ಅಶೋಕ್ ಕುಮಾರ್, ಕದ್ರಿ ಕಂಬ್ಳ ಫ್ರೆಂಡ್ಸ್‌ನಿಂದ ಉಚಿತ ನೀರು ಪೂರೈಕೆ

Update: 2016-05-06 18:59 IST

ಮಂಗಳೂರು, ಮೇ 6: ನಗರದಲ್ಲಿ ತಲೆದೋರಿರುವ ಜಲಕ್ಷಾಮದ ಹಿನ್ನೆಲೆಯಲ್ಲಿ ನೀರಿಗಾಗಿ ಜನತೆ ಪರದಾಡುವಂತಾಗಿದೆ. ನಗರದಲ್ಲಿ ನೀರಿಗಾಗಿ ಹಣವುಳ್ಳವರು ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಿದ್ದರೆ ಬಡಜನತೆ ಟ್ಯಾಂಕರ್ ನೀರನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೆ.

ಬಡಜನರು ಟ್ಯಾಂಕರ್ ನೀರನ್ನು ತರಿಸಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ನಗರದ ಕದ್ರಿ ದಕ್ಷಿಣ ವಾರ್ಡ್‌ನ ಕಾರ್ಪೊರೇಟರ್ ಡಿ.ಕೆ.ಅಶೋಕ್ ಕುಮಾರ್ ಮತ್ತು ಕದ್ರಿ ಕಂಬ್ಳ ಪ್ರೆಂಡ್ಸ್ ನಿಂದ ಉಚಿತ ನೀರು ಸರಬರಾಜು ಕಳೆದ ಮೂರು ದಿನಗಳಿಂದ ನಡೆಯುತ್ತಿದೆ.

ನಗರದ ಎತ್ತರದ ಪ್ರದೇಶಗಳಿಗೆ ನಗರಪಾಲಿಕೆಯಿಂದ ಸರಬರಾಜು ಆಗುವ ನೀರು ಮೂರು ದಿನಕ್ಕೊಮ್ಮೆಯೂ ಬರುತ್ತಿಲ್ಲ. ಅಲ್ಲದೆ ಕೆಲವು ಪ್ರದೇಶಗಳಲ್ಲಿ ಜನರಿಗೆ ಮೂರು ದಿನಕ್ಕೊಮ್ಮೆ ಬರುವ ನೀರನ್ನು ಶೇಖರಿಸಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಸ್ಯೆ ಹೊಂದಿರುವ ಪ್ರದೇಶಗಳಿಗೆ ಉಚಿತ ನೀರು ಸರಬರಾಜು ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಪಿಕಪ್ ವಾಹನದಲ್ಲಿ 2,000 ಲೀಟರ್‌ನ ಸಿಂಟೆಕ್ಸ್‌ನ್ನು ಇಟ್ಟುಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ಕೊಡ, ಬಕೆಟ್ ಮತ್ತು ಡ್ರಮ್‌ಗಳಲ್ಲಿ ಮಾತ್ರ ನೀರು ನೀಡಲಾಗುತ್ತಿದೆ. ದಿನಕ್ಕೆ ಕನಿಷ್ಟ 7 ಬಾರಿ 2,000 ಲೀಟರ್‌ನ ಸಿಂಟೆಕ್ಸನ್ನು ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಕದ್ರಿ ದಕ್ಷಿಣ ವಾರ್ಡ್‌ನ ಕೆಲವೊಂದು ಭಾಗಗಳಲ್ಲಿ ನೀರು ಸಮಸ್ಯೆಯನ್ನು ಎದುರಿಸುತ್ತಿರುವ , ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳಲು ಸಾಧ್ಯವಾಗದೆ ಇರುವವರಿಗೆ, ನೀರನ್ನು ಶೇಖರಿಸಿಟ್ಟುಕೊಳ್ಳಲು ಸಾಧ್ಯವಾಗದೆ ಇರುವ ಬಡಜನರಿಗೆ ತಮ್ಮ ಉಪಯೋಗಕ್ಕಾಗಿ ನೀರು ಸಿಗುವಂತಾಗಿದೆ.

ತೀರಾ ಬಡಜನರಿಗೆ ನೀರು ಶೇಖರಣೆ ಮಾಡಲು ವ್ಯವಸ್ಥೆಯಿಲ್ಲದೆ ಇರುವುದರಿಂದ ಮತ್ತು ಕೆಲವು ಭಾಗಗಳಿಗೆ ಮನಪಾ ನೀರು ಸರಬರಾಜು ಆಗದೆ ಇರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ನೆಲೆಯಲ್ಲಿ ನನ್ನ ಕ್ಷೇತ್ರದಲ್ಲಿ ಈ ಕಾರ್ಯ ಮಾಡುತ್ತಿದ್ದೇನೆ. ಇದಕ್ಕಾಗಿ ದಿನಕ್ಕೆ ಮೂರು ಸಾವಿರ ಖರ್ಚು ಬೀಳುತ್ತಿದ್ದು, ಜನರು ನೀರಿನಿಂದ ಸಮಸ್ಯೆಗೊಳಗಾಗಬಾರದು ಎಂದು ಇದನ್ನು ಆರಂಭಿಸಿದ್ದೇನೆ.

- ಡಿ.ಕೆ ಅಶೋಕ್ ಕುಮಾರ್, ಮನಪಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News