45 ಎಕರೆ ಗೇರು ತೋಪು ಬೆಂಕಿಗಾಹುತಿ

Update: 2016-05-06 14:13 GMT

ಕಡಬ, ಮೇ 6. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಗೆ ಗೇರುತೋಟ ಆಹುತಿಯಾದ ಘಟನೆ ಶುಕ್ರವಾರ ಆಲಂಕಾರಿನಲ್ಲಿ ನಡೆದಿದೆ. ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ಗೇರು ಅಭಿವೃದ್ದಿ ನಿಗಮದ ಗೇರು ತೋಟದ ಮಧ್ಯದಲ್ಲಿರುವ ವಿದ್ಯುತ್ ಕಂಬದಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿತು.

ಬೆಂಕಿಯ ಕಿಡಿ ಒಣಗಿದ ಹುಲ್ಲಿನ ಮೇಲೆ ಬಿದ್ದು ಉರಿಯಲಾರಂಭಿಸಿತು. ಈ ಸಂದರ್ಭ ದಾರಿಯಲ್ಲಿ ಹೋಗುತ್ತಿದ್ದವರು ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಗಾಳಿಯ ವೇಗಕ್ಕೆ ಬೆಂಕಿ ಹೆಚ್ಚುತ್ತಾ ಹೋಗಿ ಸುಮಾರು 45 ಎಕರೆ ಗೇರು ತೋಟವನ್ನು ಆವರಿಸಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಘಟನೆ ಬಗ್ಗೆ ಸುದ್ದಿ ಕೇಳಿ ಜನಸ್ತೋಮ ನೆರೆದರೂ ಬೆಂಕಿ ನಂದಿಸಲು ಸಾಧ್ಯವಾಗದೆ ಕೈಚೆಲ್ಲಿ ಪುತ್ತೂರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಪ್ರಮುಖ ಅಗ್ನಿಶಾಮಕ ಎಂ. ಗೋಪಾಲರ ನೇತೃತ್ವದ ತಂಡ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಅಗ್ನಿಶಾಮಕದಳದ ಕೆ.ನವೀನ, ಕೆ.ಅಬ್ದುಲ್ ಅಝೀಜ್, ಕೆ.ಕುಶಾಲಪ್ಪ ಗೌಡ, ಚಾಲಕ ಕಿರಣ್ ಕುಮಾರ್, ಆಲಂಕಾರು ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ನಾಗರಿಕರಾದ ಲೋಕೇಶ್, ಅನಂತ, ಉಮೇಶ್, ಚಿದಾನಂದ, ವರ್ಗೀಸ್, ಪದ್ಮನಾ ಗೌಡ ಆಲಡ್ಕ, ನಿತ್ಯಾನಂದ ನಾಡ್ತಿಲ, ನವೀನ, ದಾಮೋದರ ಆಚಾರ್ಯ ಮೊದಲಾದವರು ಸಹಕರಿಸಿದರು.

ವಿರಳವಾದ ಗೇರು ಬೆಳೆಗೆ ಬೆಂಕಿಯ ಬರೆ

ಈ ವರ್ಷ ಗೇರು ಪಸಲು ವಿರಳವಾಗಿದೆ. ಆರಂದಲ್ಲಿ ಗೇರು ತೋಟವನ್ನು ಟೆಂಡರ್ ಪಡೆಯಲು ಹಲವಾರು ಮಂದಿ ಹಿಂದೇಟು ಹಾಕಿದ್ದರು. ಕಾರ್ಮಿಕರ ಕೊರತೆಯ ನಡುವೆಯು ಗೇರು ಫಸಲು ವಿರಳವಾಗಿದ್ದ ಸಂದರ್ದಲ್ಲಿ ಇದೀಗ ಬೆಂಕಿಯ ಬರೆ ಬೀಳುವುದರೊಂದಿಗೆ ಗೇರು ತೋಟದ ಗುತ್ತಿಗೆದಾರನಿಗೆ ತುಂಬಲಾರದ ನಷ್ಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News