ಕಾರವಾರ-ಬೆಂಗಳೂರು ರೈಲಿಗೆ ಪ್ರಥಮ ದರ್ಜೆ ಹವಾನಿಯಂತ್ರಿತ ಕೋಚ್: ರೈಲ್ವೆ ಸಚಿವರ ಭರವಸೆ
ಮಂಗಳೂರು, ಮೇ 6: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಮೇ 5ರಂದು ದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭುರನ್ನು ಭೇಟಿ ಮಾಡಿದರು. ಈ ಭೇಟಿಯ ವೇಳೆ ಆಳ್ವ, ಬೆಂಗಳೂರಿನಿಂದ ಕಾರವಾರಕ್ಕೆ ಚಲಿಸುವ ಕಾರವಾರ ಎಕ್ಸ್‌ಪ್ರೆಸ್ (ಸಂಖ್ಯೆ: 16523) ಹಾಗೂ ಕಾರವಾರದಿಂದ ಬೆಂಗಳೂರಿಗೆ ಚಲಿಸುವ ಬೆಂಗಳೂರು ಎಕ್ಸ್‌ಪ್ರೆಸ್ (ಸಂಖ್ಯೆ: 16524) ರೈಲುಗಳಲ್ಲಿ ಪ್ರಥಮ ದರ್ಜೆ ಹವಾನಿಯಂತ್ರಿತ ಕೋಚ್ ಸೌಲಭ್ಯವನ್ನು ಅಳವಡಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರೈಲ್ವೆ ಸಚಿವರನ್ನು ವಿನಂತಿಸಿದರು.
ಮಂಗಳೂರು ಮೂಲಕ ರಾತ್ರಿಯ ವೇಳೆ ಚಲಿಸುವ ಈ ರೈಲುಗಳಲ್ಲಿ ಪ್ರಥಮ ದರ್ಜೆ ಹವಾನಿಯಂತ್ರಿತ ಕೋಚ್ ಸೌಲಭ್ಯವನ್ನು ಒದಗಿಸಿದರೆ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗುವುದು. ಅಲ್ಲದೆ ಪ್ರಸ್ತುತ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಡಚಣೆ ದಿನನಿತ್ಯದ ಸಮಸ್ಯೆಯಾಗಿದೆ ಹಾಗೂ ಹೆದ್ದಾರಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಕಾರವಾರ ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಥಮ ದರ್ಜೆ ಹವಾನಿಯಂತ್ರಿತ ಕೋಚ್ ಸೌಲಭ್ಯವನ್ನು ಅಳವಡಿಸಿದರೆ ರೈಲ್ವೇ ಇಲಾಖೆಗೂ ಹೆಚ್ಚಿನ ಅದಾಯ ಬರುವುದಲ್ಲದೆ ಈ ಪ್ರದೇಶಗಳ ಪ್ರಯಾಣಿಕರಿಗೂ ಆರಾಮದಾಯಕ ಪ್ರಯಾಣಕ್ಕಾಗಿ ಹೆಚ್ಚಿನ ಅವಕಾಶವನ್ನು ಒದಗಿಸುವುದು.
ಈ ರೈಲು ಮಾರ್ಗದ ಪ್ರಯಾಣದಲ್ಲಿ ಸಿಗುವ ಪ್ರಾಕೃತಿಕ ಮನಮೋಹಕ ದೃಶ್ಯಗಳು ಪ್ರಯಾಣಿಕರಿಗೆ ಮುದ ನೀಡುವುದರ ಜೊತೆಗೆ, ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಿರುವ ಅಂಶಗಳ ಕುರಿತು ಆಳ್ವ ಸಚಿವರಿಗೆ ವಿವರಿಸಿದರು.
ರೈಲ್ವೇ ಸಚಿವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮನಗೆ ಸ್ಪಂದಿಸಿ, ಉಲ್ಲೇಖಿತ ಪ್ರಸ್ತಾವನೆಯನ್ನು ಆದಷ್ಟು ಶೀಘ್ರವಾಗಿ ಕಾರ್ಯಗತಗೊಳಿಸುವಂತೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.