ಸ್ಥಗಿತದ ಭೀತಿಯಲ್ಲಿ ಎಂಆರ್‌ಪಿಎಲ್!
ಮಂಗಳೂರು, ಮೇ6: ನೇತ್ರಾವತಿ ನದಿ ಬರಿದಾಗಿರುವಂತೆಯೇ, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯ ಪ್ರಮುಖ ಸಂಸ್ಥೆಯಾಗಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಪೂರ್ಣ ಸ್ಥಗಿತದ ಭೀತಿಯನ್ನು ಎದುರಿಸುತ್ತಿದೆ. ಸಂಪೂರ್ಣ ಸ್ಥಗಿತವಾದಲ್ಲಿ ರಾಜ್ಯದಲ್ಲಿ ಕೆಲ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗುವ ಭೀತಿ ಎದುರಾಗಿದೆ.
ಇಡೀ ಕರ್ನಾಟಕಕ್ಕೆ ಪೆಟ್ರೋಲಿಯಂ ಉತ್ಪನ್ನ ಪೂರೈಸುತ್ತಿರುವ ಎಂಆರ್‌ಪಿಎಲ್‌ನಲ್ಲಿ ನೀರಿನ ಕೊರತೆಯಿಂದಾಗಿ ಡೀಸೆಲ್ ಹಾಗೂ ಪೆಟ್ರೋಲ್ ಉತ್ಪಾದನೆ ಅನುಕ್ರಮವಾಗಿ ಶೇ.50 ಹಾಗೂ ಶೇ.30ರಷ್ಟು ಕಡಿತಗೊಂಡಿದೆ. ಇಲ್ಲಿ ಉತ್ಪಾದನೆಯಾಗುವ ಇಂಡಿಯನ್ ಆಯಿಲ್, ಎಚ್‌ಪಿಸಿಎಲ್, ಬಿಪಿಸಿಎಲ್, ಶೆಲ್ ಕಂಪನಿಗಳ ಮೂಲಕ ವಿವಿಧ ಕಡೆಗಳಿಗೆ ಪೂರೈಕೆಯಾಗುತ್ತಿದೆ. ನೀರಿನ ಕೊರತೆಯಿಂದಾಗಿ ಈಗಾಗಲೇ ಎಂಆರ್‌ಪಿಎಲ್ ಸದ್ಯಕ್ಕೆ ಭಾಗಶ: ಶಟ್‌ಡೌನ್ ಆಗಿದೆ. ಈಗಾಗಲೇ ಎಂಆರ್‌ಪಿಎಲ್‌ನ ತೃತೀಯ ಹಂತದಲ್ಲಿನ ಉತ್ಪಾದನಾ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ.
ಜಿಲ್ಲೆಯಲ್ಲಿ ತೀವ್ರ ನೀರಿನ ಕೊರತೆ ಹಿನ್ನೆಲೆಯಲ್ಲಿ ನೇತ್ರಾವತಿಯಿಂದ ಎಂಆರ್‌ಪಿಎಲ್ ಸೇರಿದಂತೆ ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮಂಗಳೂರು ನಗರ ಒಳಚರಂಡಿ ತ್ಯಾಜ್ಯ ಸಂಸ್ಕರಿತ ನೀರು ಹಾಗೂ ಸಂಗ್ರಹದಲ್ಲಿದ್ದ ನೀರನ್ನು ಉಪಯೋಗಿಸಿ ಕಳೆದ ಕೆಲ ದಿನಗಳಿಂದ ಎಂಆರ್‌ಪಿಎಲ್ ಭಾಗಶ: ಚಾಲನೆಯಲ್ಲಿದೆ. ಒಂದೆರಡು ದಿನಗಳಲ್ಲಿ ಮಳೆಯಾಗದಿದ್ದಲ್ಲಿ ಎಂಆರ್‌ಪಿಎಲ್ ಸಂಪೂರ್ಣ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಇದ್ದು, ಇದರಿಂದ ರಾಜ್ಯದಲ್ಲಿ ನೀರಿನ ಹಾಹಾಕಾರದ ಜತೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಿಸಿಯೂ ಜನತೆಯನ್ನು ಕಾಡಲಿದೆ.
ಎಎಂಆರ್ ಕಿರು ಜಲ ವಿದ್ಯುತ್ ಘಟಕದ ಅಣೆಕಟ್ಟೆ ಬಳಿ ನಿರ್ಮಿಸಿರುವ ಸಣ್ಣ ಅಣೆಕಟ್ಟೆಯಿಂದ ಎಂಆರ್‌ಪಿಎಲ್ ನೀರು ಪಡೆಯುತ್ತಿತ್ತು. ಆದರೆ ನಗರದಲ್ಲಿ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಒಳಹರಿವು ನಿಂತು ಅಣೆಕಟ್ಟಿನ ನೀರು ತೀರಾ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸುವಂತೆ ಎಪ್ರಿಲ್ 25ರಂದು ಆದೇಶಿಸಿದ್ದರು. ಇದರ ಪರಿಣಾಮವಾಗಿ ಪೆಟ್ರೋಲಿಯಂ ಉಪ ಉತ್ಪನನಗಳ ಎರಡು ಸಂಸ್ಕರಣಾ ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು.
ಸಂಪೂರ್ಣ ಸ್ಥಗಿತವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಅದು ಒಂದು ವಾರದವರೆಗೆ ಮುಂದುವರಿಯಬಹುದು. ಈಗಾಗಲೇ ಎಂಆರ್‌ಪಿಎಲ್‌ನಲ್ಲಿ ಡೀಸೆಲ್ ಉತ್ಪಾದನೆ ದಿನಕ್ಕೆ 12000 ಕಿಲೋ ಲೀಟರ್ ಹಾಗೂ ಪೆಟ್ರೋಲ್ ಉತ್ಪಾದನೆ 1000 ಕಿಲೋ ಲೀಟರ್ ಕಡಿತವಾಗಿದೆ. ಎಲ್‌ಪಿಜಿಯಲ್ಲೂ ಶೇ. 50ರಷ್ಟು ಉತ್ಪಾದನೆ ಕಡಿತವಾಗಿದೆ ಎಂದು ಎಂಆರ್‌ಪಿಎಲ್‌ನ ಮೂಲಗಳು ತಿಳಿಸಿವೆ.
ಎಂಆರ್‌ಪಿಎಲ್ ರಿಫೈನರಿ ಚಲಾಯಿಸಲು ಪ್ರತಿದಿನ 6 ಎಂಜಿಡಿಯಷ್ಟು ನೀರು ಬೇಕು. ಇದರಲ್ಲಿರುವ ಕ್ಯಾಪ್ಟಿವ್ ಪವರ್ ಪ್ಲಾಂಟ್ ಮೂಲಕ ವದ್ಯಿುತ್ ಉತ್ಪಾದಿಸಲು ನೀರು ಬೇಕು. ಅತ್ಯಧಿಕ 300, 4090 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದ್ದು, ಅದನ್ನು ತಣಿಸುವುದಕ್ಕೆ ಭಾರೀ ಪ್ರಮಾಣದ ನೀರಿನ ಅಗತ್ಯವಿದೆ. 2012ರಲ್ಲೂ ಶಟ್‌ಡೌನ್ ಆಗಿತ್ತು
ಪ್ರಸಕ್ತ ಪರಿಸ್ಥಿತಿ 2012ರ ಎಪ್ರಿಲ್‌ನಲ್ಲೂ ತಲೆದೋರಿತ್ತು. ಸುಮಾರು ಐದಾರು ದಿನಗಳ ಕಾಲ ಪೆಟ್ರೋಲಿಯಂ ಪೂರೈಕೆ ಸ್ಥಗಿತಗೊಂಡು ಸಮಸ್ಯೆಯಾಗಿತ್ತು. ನೇತ್ರಾವತಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ಗೆ ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿತ್ತು.