×
Ad

ಸಮಾಜವಾದವು ವ್ಯಕ್ತಿ ಮತ್ತು ಸಮಾಜದ ಸಂಬಂಧದ ತಳಹದಿಯಲ್ಲಿ ಕಟ್ಟಲ್ಪಟ್ಟಿದೆ: ಪ್ರೊ. ರಾಜಾರಾಂ ತೋಳ್ಪಾಡಿ

Update: 2016-05-06 23:27 IST

ಕೊಣಾಜೆ, ಮೇ 6: ಮಾರ್ಕ್ಸ್‌ವಾದ ಸಮಾಜವಾದವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಮಾಜವಾದವು ಮುಖ್ಯವಾಗಿ ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧದ ತಳಹದಿಯಲ್ಲಿ ಕಟ್ಟಲ್ಪಟ್ಟಿದೆ. ವ್ಯಕ್ತಿಯನ್ನು ಶೋಷಿಸುವ ಬಂಡವಾಳಶಾಹಿತ್ವಕ್ಕೆ ಪರ್ಯಾಯವಾಗಿ ವ್ಯಕ್ತಿ ಮತ್ತು ಸಮಾಜವನ್ನು ಪೋಷಿಸುವ ಸಮಾಜವಾದ ಬಲಗೊಳ್ಳಬೇಕಿದೆ. ನೆಹರು, ಲೋಹಿಯಾ, ಜಯಪ್ರಕಾಶ್ ನಾರಾಯಣರಂತಹ ಮಹತ್ವದ ಚಿಂತಕರು ಸಮಾಜವಾದವನ್ನು ಬಾರತದಲ್ಲಿ ಬಲಗೊಳಿಸಿದರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜಾರಾಂ ತೋಳ್ಪಾಡಿ ಹೇಳಿದ್ದಾರೆ.

ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಸೆಮಿನಾರ್ ಹಾಲ್‌ನಲ್ಲಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ನಡೆದ ನಿತ್ಯೋತ್ಸವ ಸಂಸ್ಕೃತಿ ಚಿಂತನ ಕಾರ್ಯಕ್ರಮದಲ್ಲಿ ಸಮಾಜವಾದದ ಅನೇಕ ವ್ಯಾಖ್ಯಾನಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಮಾಜವಾದ ಎಂಬುದು ಆಧುನಿಕ ವಿದ್ಯಮಾನವಾಗಿದ್ದು ಬಂಡವಾಳಶಾಹಿ ವ್ಯವಸ್ಥೆಯನ್ನು ಎದುರಿಸುವ ಉದ್ದೇಶದಿಂದ ಹುಟ್ಟಿಕೊಂಡದ್ದು. ನಮ್ಮ ಕಾಲದ ಬಂಡವಾಳಶಾಹಿ ದೌರ್ಜನ್ಯವನ್ನು ಎದುರಿಸಲು ಸಮಾಜವಾದದ ಆಶಯಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ, ಡಾ. ರಾಜಶ್ರೀ, ಡಾ. ಗೋವಿಂದ ರಾಜ್, ವಿದ್ಯಾರ್ಥಿಗಳಾದ ಮುಸ್ತಫಾ ಸಂವಾದದಲ್ಲಿ ಭಾಗವಹಿಸಿದರು. ನಿತ್ಯೋತ್ಸವದ ಸಂಚಾಲಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.

ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ನವ್ಯಶ್ರೀ ಸ್ವಾಗತಿಸಿದರು. ದೊಡ್ಡ ಶಿವಕುಮಾರ್ ವಂದಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News