ಹರೇಕಳ, ಅಂಬ್ಲಮೊಗರುವಿಗೆ ನೀರು ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ
ಕೊಣಾಜೆ, ಮೇ 6: ಹರೇಕಳ ಮತ್ತು ಅಂಬ್ಲಮೊಗರುವಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಗಂಭೀರ ಪ್ರಮಾಣದಲ್ಲಿಲ್ಲ, ಆದರೂ ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಪಂ ಸದಸ್ಯೆ ಧನಲಕ್ಷ್ಮೀ ಭರವಸೆ ನೀಡಿದರು.
ಜಿಲ್ಲೆಯಾದ್ಯಂತ ಗಂಭೀರ ನೀರಿನ ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ಸೋಮೇಶ್ವರ ಜಿಪಂ ಕ್ಷೇತ್ರ ವ್ಯಾಪ್ತಿಯ ಹರೇಕಳ ಮತ್ತು ಅಂಬ್ಲಮೊಗರುವಿನಲ್ಲಿ ಶುಕ್ರವಾರ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದರು. ನೀರಿನ ಸಮಸ್ಯೆ ಗಂಭೀರವಾಗಿಲ್ಲ ಎನ್ನುವ ಕಾರಣಕ್ಕೆ ನೀರನ್ನು ವ್ಯರ್ಥ ಪೋಲು ಮಾಡದೆ ಸಂದರ್ಭಕ್ಕನುಸಾರ ಬಳಸಿ, ಮುಂದಿನ ಕೆಲವು ದಿನಗಳಲ್ಲಿ ಮಳೆ ಬರುವ ನಿರೀಕ್ಷೆಯಿದ್ದರೂ ಆ ಬಗ್ಗೆ ಅತಿಯಾದ ವಿಶ್ವಾಸ ಬೇಡ. ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ, ಜಾತಿ ವಿಚಾರ ಇಲ್ಲದೆ ಮುಂದಿನ ಐದು ವರ್ಷದ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮಗಳ ಅಭಿವೃದ್ಧಿ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಎಲ್ಲೆಡೆ ನೀರಿನ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಪಂಗೆ ಮನವಿ ಹಿಡಿದುಕೊಂಡು ಹೋಗುತ್ತಿದ್ದಾರೆ, ಆದರೆ ಧನಲಕ್ಷ್ಮಿ ಅವರು ಜನ ತಮ್ಮ ಬಳಿ ಬರುವ ಮುನ್ನ ತಾವೇ ಜನರ ಬಳಿ ಹೋಗಿ ಸಮಸ್ಯೆ ಕೇಳುತ್ತಿರುವುದು ಸ್ವಾಗತಾರ್ಹ. ರಾಜಕೀಯರಹಿತ ಶ್ರಮದಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭ ಹರೇಕಳ ಗ್ರಾಪಂ ಅಧ್ಯಕ್ಷೆ ಅನಿತಾ ಡಿಸೋಜ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಮಾಜಿ ಅಧ್ಯಕ್ಷ ಮಹಮ್ಮದ್ ಶಾಲಿ, ಮೋಹನ್‌ದಾಸ್ ಶೆಟ್ಟಿ, ಸಮಾಜಸೇವಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಪಂ ಇಂಜಿನಿಯರ್ ನಿತಿನ್, ಹರೇಕಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಮಲಾಕ್ಷ, ಉಪಸ್ಥಿತರಿದ್ದರು.