ಮೇ 8ರಂದು ಮೂಲರಪಟ್ಣದಲ್ಲಿ 10 ಜೋಡಿಗಳ ಸಾಮೂಹಿಕ ವಿವಾಹ
ಬಂಟ್ವಾಳ, ಮೇ 5: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ಅಧೀನಕ್ಕೊಳಪಟ್ಟಿರುವ ದಾರುಲ್ ಉಲೂಂ ಮದರಸ, ಯುವ ಸಮಿತಿ ಇದರ ಅಂಗಸಂಸ್ಥೆ ನುಸ್ರತುಲ್ ಅನಾವ್ ಸ್ವಲಾತ್ ಕಮಿಟಿ ಮೂಲರಪಟ್ನ ಇವುಗಳ ಸಂಯುಕ್ತಾಶ್ರಯದಲ್ಲಿ 10 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 8ರಂದು ಬೆಳಗ್ಗೆ 9:30ಕ್ಕೆ ಮೂಲರಪಟ್ಣ ಎಮ್.ಜೆ.ಎಮ್. ಗ್ರೌಂಡ್‌ನಲ್ಲಿ ನಡೆಯಲಿದೆ ಎಂದು ಸಂಘಟಕ ನೌಶಾದ್ ಹಾಜಿ ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದು ಅಧ್ಯಕ್ಷತೆ ಹಾಗೂ ನಿಖಾಹ್ ನೇತೃತ್ವವನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅರ್ಹರಿ ವಹಿಸಲಿದ್ದಾರೆ. ಸೈಯದ್ ಹಮೀದಾಲಿ ಶಿಹಾಬ್ ತಂಙಳ್ ಪಾಣಾಕ್ಕಾಡ್ ದುಅ ಆಶಿರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಅಯಚಂದ್ರ ಜೈನ್, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವ, ಪ್ರಗತಿಪರ ಕೃಷಿಕ ರಾಜೇಶ್ ನ್‌ಕಾ ಉಳಿಪಾಡಿಗುತ್ತು ಸಹಿತ ಜನಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ ಮುಖಂಡರು ಬಾಗವಹಿಸಲಿದ್ದಾರೆ.
ಈ ಉಚಿತ ಸಾಮೂಹಿಕ ವಿವಾಹವು ವರದಕ್ಷಿಣೆ ರಹಿತವಾಗಿ ನಡೆಸಲಾಗುವುದು. ಆರ್ಥಿಕವಾಗಿ ಅತೀ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳನ್ನು ಗುರುತಿಸಿ 5 ಪವನ್ ಚಿನ್ನ ಸಹಿತ ಅವರಿಗೆ 25 ಸಾವಿರ ರೂ. ವೌಲ್ಯದ ಸಕಲ ವಸ್ತ್ರಾರಣ ಹಾಗೂ ವರನಿಗೆ ಹತ್ತು ಸಾವಿರ ರೂ. ವೌಲ್ಯದ ವಸ್ತ್ರಗಳನ್ನು ಸಂಘಟಕರು ನೀಡಲಿದ್ದಾರೆ ಎಂದು ಅವರು ವಿವರಿಸಿದರು.
ನುಸ್ರತುಲ್ ಅನಾವ್ ಸ್ವಲಾತ್ ಕಮಿಟಿಯು ಮುಲ್ಲಾರ್‌ಪಟ್ನ ಜಮಾತ್ ವ್ಯಾಪ್ತಿಯಲ್ಲಿ ಕಳೆದ 14 ವರ್ಷದಿಂದ ಕಾರ್ಯಚರಿಸುತ್ತಿದ್ದು ಹಲವಾರು ಜನಪರ ಹಾಗೂ ಅಸಕ್ತ ಜನರ ಕಣ್ಣೀರು ಒರೆಸುವಂತ ಕೆಲಸವನ್ನು ಮಾಡುತ್ತಿದೆ. ಮುಂದಿನ ವರ್ಷ ಗಂಜಿಮಠದಲ್ಲಿ ಸರ್ವ ಧರ್ಮದ ಜನರ ಉಚಿತ ಸಾಮೂಹಿಕ ವಿವಾಹವನ್ನು ನಡೆಸಲು ಉದ್ದೇಶಿಸಿದ್ದು ಈ ಸಂಬಂಧವಾಗಿ ಪೂರ್ವಬಾವಿ ಸಬೆಯನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರಳ ಪಂಚಾಯತ್ ಸದಸ್ಯ ಎಂ.ಬಿ.ಅಶ್ರಪ್, ಸಮಿತಿ ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್, ಎಂ.ಎಸ್.ಶಾಲಿ ಉಪಸ್ಥಿತರಿದ್ದರು.