ದೇವಸ್ಥಾನದಲ್ಲಿ ಕಳ್ಳತನ
Update: 2016-05-06 23:34 IST
ಅಮಾಸೆಬೈಲು, ಮೇ 6: ಶೇಡಿಮನೆ ಗ್ರಾಮದ ನಾಗಕನ್ನಿಕಾ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಕಳೆದ ತಡ ರಾತ್ರಿ ಕಳ್ಳರು ನುಗ್ಗಿ ಸುಮಾರು 1.20 ಲಕ್ಷ ರೂ. ವೌಲ್ಯದ ಸೊತ್ತು ಹಾಗೂ ನಗದು ದೋಚಿದ ಘಟನೆ ನಡೆದಿದೆ.
ದೇವಸ್ಥಾನದ ಉಪ್ಪರಿಗೆಯಿಂದ ಕೆಳಗೆ ಇಳಿಯುವ ಮೆಟ್ಟಿನ ತಗಡಿನ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಗರ್ಭಗುಡಿಯ ಬಾಗಿಲಿಗೆ ಅಳವಡಿಸಿದ ಚಿಲಕವನ್ನು ತುಂಡು ಮಾಡಿ ದೇವರ ಬೆಳ್ಳಿಯ ಪ್ರಭಾವಳಿ ಮತ್ತು ಪತಾಕೆಗಳು, ಉತ್ಸವ ಮೂರ್ತಿಯ ಬೆಳ್ಳಿಯ ಮುಖವಾಡ, ಬೆಳ್ಳಿ ಆರತಿ ತಟ್ಟೆ, ಬೆಳ್ಳಿಯ ಕಾಲುದೀಪ, ಬೆಳ್ಳಿಯ ಸಣ್ಣ ತಟ್ಟೆ, ಚಿನ್ನದ ಸರ, ಚಿನ್ನದ ಕರಿಮಣಿ ಸರ, ಚಿನ್ನದ ಕರಿಮಣಿ ಸರ ಮತ್ತು ಪದಕ, ಅಟ್ಟ ಪ್ರಭಾವಳಿಯ ಪತಾಕೆಗಳು, ದೇವಿಯ ಕಾಣಿಕೆ ಡಬ್ಬಿಹಣ, ಗಣಪತಿ ದೇವರ ಕಾಣಿಕೆ ಡಬ್ಬಿ ಹಣ, ನಾಗನ ಕಾಣಿಕೆ ಡಬ್ಬಿ ಹಣ, ಬೆಳ್ಳಿಯ ಕೌಳಿಗೆ ಸೌಟುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.