×
Ad

ಉಪವಾಸದಿಂದ ದಲಿತನ ಸಾವು:ಉ.ಪ್ರದೇಶಕ್ಕೆ ಕೇಂದ್ರದ ತನಿಖಾ ತಂಡ

Update: 2016-05-06 23:48 IST

ಹೊಸದಿಲ್ಲಿ,ಮೇ 6: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಹಸಿವೆಯಿಂದ ದಲಿತನೋರ್ವ ಸಾವನ್ನಪ್ಪಿರುವ ಘಟನೆಯ ತನಿಖೆಗಾಗಿ ಕೇಂದ್ರ ತಂಡವೊಂದನ್ನು ಬುಂದೇಲ್‌ಖಂಡಕ್ಕೆ ಕಳುಹಿಸಲಾಗುವುದು ಎಂದು ಆಹಾರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಪ್ರಭಾತ ಝಾ ಅವರು ಬಂಡಾ ಜಿಲ್ಲೆಯಲ್ಲಿ ಕನ್ಹಯ್ಯಾ ಎಂಬ ದಲಿತ ವ್ಯಕ್ತಿ ಹಸಿವಿನಿಂದ ಸಾವನ್ನಪ್ಪಿದ್ದಾನೆ ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪಾಸ್ವಾನ್, ಚುನಾವಣೆಗಳು ನಡೆಯುತ್ತಿರುವ ತಮಿಳುನಾಡು ಮತ್ತು ಕೇರಳ ಹೊರತುಪಡಿಸಿ ದೇಶಾದ್ಯಂತ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಸಬ್ಸಿಡಿ ದರಗಳಲ್ಲಿ ವಿತರಣೆಗಾಗಿ ಶೇ.100ರಷ್ಟು ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿರುವಾಗ ವ್ಯಕ್ತಿಯೋರ್ವ ಹಸಿವಿನಿಂದ ಸಾಯಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಮೃತವ್ಯಕ್ತಿಯ ಕುಟುಂಬಕ್ಕೆ ಎಂದಿನಿಂದ ಆಹಾರ ಧಾನ್ಯಗಳನ್ನು ನೀಡಲಾಗಿರಲಿಲ್ಲ ಎನ್ನುವುದನ್ನೂ ಕೇಂದ್ರದ ತಂಡವು ಕಂಡುಕೊಳ್ಳಲಿದೆ ಎಂದ ಅವರು, ಹಿಂದೆ ಬಿಹಾರದಲ್ಲಿಯೂ ಇಂತಹ ಘಟನೆ ನಡೆದಾಗ ಕೇಂದ್ರದ ತಂಡವನ್ನು ಕಳುಹಿಸಲಾಗಿತ್ತು ಎಂದರು.

ತನ್ನ ಪತಿ ಹಸಿವಿನಿಂದ ಸಾವನ್ನಪ್ಪಿದ್ದಾನೆ ಎಂದು ಕನ್ಹಯ್ಯಾನ ಪತ್ನಿ ಮುನ್ನಿದೇವಿ ಹೇಳಿಕೆ ನೀಡಿದ್ದಾಳೆ. ಅಂತ್ಯಸಂಸ್ಕಾರವನ್ನು ಮುಗಿಸುವಂತೆ ತನ್ನ ಕುಟುಂಬದ ಮೇಲೆ ಒತ್ತಡವಿತ್ತು ಎಂದೂ ಆಕೆ ಆರೋಪಿಸಿದ್ದಾಳೆ ಎಂದು ಝಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News