ಮೇ 10ರಂದು ಬಂಟ್ವಾಳ ತಾಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ
ಬಂಟ್ವಾಳ, ಮೇ 7: ತಾಲೂಕು ಪಂಚಾಯತ್ ಚುನಾವಣೆ ನಡೆದು ಸುದೀರ್ಘ ಎರಡು ತಿಂಗಳ ಬಳಿಕ ಕೊನೆಗೂ ಬಂಟ್ವಾಳ ತಾಪಂನ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇ 10ರಂದು ನಡೆಯಲಿದ್ದು ಅಂದು ಬೆಳಗ್ಗೆ 11ರಿಂದ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ ಮೂರು ಗಂಟೆಗೆ ಮಂಗಳೂರು ಸಹಾಯಕ ಕಮಿಷನರ್ ಡಾ. ಡಿ.ಅಶೋಕ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ’ಎ’ಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ಅರ್ಹರಾಗುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. 34 ಸ್ಥಾನಗಳನ್ನು ಹೊಂದಿರುವ ಬಂಟ್ವಾಳ ತಾಪಂನಲ್ಲಿ ಕಾಂಗ್ರೆಸ್ 22, ಬಿಜೆಪಿ 12 ಸ್ಥಾನಗಳನ್ನು ಪಡೆದಿದೆ. ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ನಲ್ಲಿ ಇದೀಗ ಅಧ್ಯಕ್ಷ ಹುದ್ದೆಗೆ ಪೈಪೋಟಿ ಜೋರಾಗಿದೆ.
ಪ್ರಮುಖವಾಗಿ ಹಿರಿಯ ಸದಸ್ಯರು, ಮಾಜಿ ಉಪಾಧ್ಯಕ್ಷರಾದ ಚಂದ್ರಹಾಸ ಕರ್ಕೆರಾ, ಉಸ್ಮಾನ್ ಕರೋಪಾಡಿ, ಇದೇ ಮೊದಲ ಬಾರಿಗೆ ತಾಪಂ ಪ್ರವೇಶಿಸಿರುವ ಯುವ ನಾಯಕರಾದ ಪ್ರಭಾಕರ ಪ್ರಭು, ಅಬ್ಬಾಸ್ ಅಲಿ, ಸಂಜೀವ ಪೂಜಾರಿ ಅಧ್ಯಕ್ಷ ಹುದ್ದೆಯ ರೇಸಿನ ಮುಂಚೂಣಿಯಲ್ಲಿದ್ದಾರೆ. ಇವರೆಲ್ಲರೂ ಸಚಿವ ರಮಾನಾಥ ರೈಯವರ ಆಪ್ತರಾಗಿ ಗುರುತಿಸಿಕೊಂಡವರಾಗಿದ್ದಾರೆ. ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳಲು ಈಗಾಗಲೇ ತಾಪಂ ಹಲವು ಸದಸ್ಯರು ರಮಾನಾಥ ರೈಯವರ ಹಿಂದೆ ಮುಂದೆ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.
ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಸಚಿವ ರಮಾನಾಥ ರೈರವರೇ ಹೈಕಮಾಂಡ್ ಆಗಿದ್ದರೂ ಚುನಾವಣೆ ಪ್ರಕ್ರಿಯೆಯ ಮುಂದಿನ ದಿನ ನಡೆಯುವ ಕಾಂಗ್ರೆಸ್‌ನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುವುದು. ಒಂದು ವೇಳೆ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಯದಿದ್ದಲ್ಲಿ ಆಂತರಿಕ ಚುನಾವಣೆಯ ಮೂಲಕ ಅಭ್ಯರ್ಥಿಗಳನ್ನು ಆರಿಸಲಾಗುವುದು ಎಂದು ಪಕ್ಷದ ಮುಖಂಡರೋರ್ವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಪುರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲೂ ಅಧಿಕಾರಕ್ಕಾಗಿ ಪುರಸಭಾ ಕಾಂಗ್ರೆಸ್ ಸದಸ್ಯರಲ್ಲಿ ಭಾರೀ ಪೈಪೋಟಿ ನಡೆದು ಕೊನೆಗೆ ಸರ್ವ ಸದಸ್ಯರ ನಡುವೆ ನಡೆದ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮಾಕೃಷ್ಣ ಆಳ್ವ ಹಾಗೂ ಉಪಾಧ್ಯಕ್ಷರಾಗಿ ಮುಹಮ್ಮದ್ ನಂದರಬೆಟ್ಟು ಆಯ್ಕೆಯಾಗಿದ್ದರು.
ಪುರಸಭಾ ಅಧಿಕಾರ ಕೈ ತಪ್ಪಿದ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ಈಗಲೂ ಪಕ್ಷದ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದಾರೆ. ಹಾಗೆಯೇ ಇದೀಗ ಬಂಟ್ವಾಳ ತಾಪಂ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ತಾಪಂ ಅಧ್ಯಕ್ಷ ಉಪಾಧ್ಯಕ್ಷ ಪಟ್ಟಕ್ಕಾಗಿ ಸದ್ಯಸರ ನಡುವೆ ತೆರೆಮರೆಯಲ್ಲಿ ನಡೆಯುತ್ತಿರುವ ಕಸರತ್ತನ್ನು ಪಕ್ಷದ ಹೈಕಮಾಂಡ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.
ಮುಸ್ಲಿಮರಿಗೆ ದಕ್ಕಲಿದೆಯೇ ಅಧ್ಯಕ್ಷ ಪಟ್ಟ?
1995ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಬಂಟ್ವಾಳ ತಾಲೂಕು ಪಂಚಾಯತ್‌ನ ಉಪಾಧ್ಯಕ್ಷರಾಗಿ ಮುಸ್ಲಿಮ್ ಸಮುದಾಯದ ಪಿ.ಉಮ್ಮರ್ (2002-03), ಎ.ಉಸ್ಮಾನ್ ಕರೋಪಾಡಿ (2006-07) ಆಯ್ಕೆಯಾಗಿದ್ದಾರಾದರೂ ಈವರೆಗೆ ಆ ಸಮುದಾಯಕ್ಕೊಳಪಟ್ಟ ಒಬ್ಬನೇ ಒಬ್ಬ ಅಧ್ಯಕ್ಷರಾಗಿಲ್ಲ.
ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮ್ ಮತಗಳು ಪ್ರಧಾನ ಪಾತ್ರ ವಹಿಸುತ್ತಿದೆ. ಹಾಗಾಗಿ ಮೇ 10ರಂದು ನಡೆಯುವ ತಾಪಂ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸದಸ್ಯರಿಗೆ ನೀಡಬೇಕೆಂಬ ಆಗ್ರವೂ ಪಕ್ಷದ ಮುಸ್ಲಿಮ್ ಮುಖಂಡರಲ್ಲಿ ಕೇಳಿ ಬರುತ್ತಿದೆ. ಆದರೆ ಪಕ್ಷದ ಹೈಕಮಾಂಡ್ ಈ ಅಗ್ರಹವನ್ನು ಎಷ್ಟರ ಮಟ್ಟಿಗೆ ಪರಿಗಣಿಸಲಿದ್ದಾರೆ ಎಂಬುದು ಚುನಾಣೆಯ ಬಳಿಕವಷ್ಟೇ ಗೊತ್ತಾಗಲಿದೆ.