ಭರದಿಂದ ಸಾಗುತ್ತಿದೆ ತುಂಬೆ ಹೊಸ ಡ್ಯಾಂ ಕಾಮಗಾರಿ
ಬಂಟ್ವಾಳ, ಮೇ 7: ತುಂಬೆ ನೇತ್ರಾವತಿ ನದಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ವೆಂಟೆಡ್ ಡ್ಯಾಂನ ಕೆಲಸ ಭರದಿಂದ ಸಾಗಿದ್ದು ಇದೀಗ ಡ್ಯಾಂಗೆ ಬಾಗಿಲು ಅಳವಡಿಸುವ ಕಾರ್ಯ ನಡೆಯುತ್ತಿದೆ.
ಹಳೆ ಡ್ಯಾಂನ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಹೊಸ ಡ್ಯಾಂನ ಕಾಮಗಾರಿ ಈ ತಿಂಗಳಾಂತ್ಯದಲ್ಲಿ ಮುಗಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳೆ ಡ್ಯಾಮಿನ ಬಾಗಿಲು ಮಾನವ ಶ್ರಮದಿಂದಲೇ ತೆಗೆಯುವುದು ಹಾಗೂ ಹಾಕುತ್ತಿದ್ದರೆ ಹೊಸ ಡ್ಯಾಮಿನ ಬಾಗಿಲು ಹಾಕುವುದು ಹಾಗೂ ತೆರೆಯುವುದು ಯಾಂತ್ರೀಕೃತವಾಗಿ ನಡೆಯಲಿದೆ.
ತುಂಬೆ ಡ್ಯಾಮಿನಲ್ಲಿ ನೀರು ಬರಿದಾಗಿದ್ದರಿಂದ ಮಂಗಳೂರು ಮಹಾ ನಗರಕ್ಕೆ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು ಜನರು ನೀರಿಗಾಗಿ ಕಷ್ಟಪಡುವಂತಾಗಿದೆ. ಹೊಸ ಡ್ಯಾಮಿನ ಕಾಮಗಾರಿ ಕಳೆದ ಮಳೆಗಾಲಕ್ಕೆ ಮೊದಲೇ ಪೂರ್ಣಗೊಂಡಿದ್ದರೆ ಪ್ರಸ್ತುತ ಬೇಸಿಗೆಯಲ್ಲಿ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ.