ಪುತ್ತೂರು ತಾಪಂ ಅಧ್ಯಕ್ಷೆಯಾಗಿ ಭವಾನಿ ಚಿದಾನಂದ, ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಯ್ಕೆ
ಪುತ್ತೂರು, ಮೇ 7: ಪುತ್ತೂರು ತಾಲೂಕು ಪಂಚಾಯತ್‌ನ ಅಧ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಗಳೆರಡನ್ನೂ ಮಹಿಳೆಯರು ಅಲಂಕರಿಸಿದ್ದಾರೆ.
ಬಿಜೆಪಿ ಬಹುಮತ ಹೊಂದಿರುವ ಪುತ್ತೂರು ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಕೆಯ್ಯೂರು ಕ್ಷೇತ್ರದ ಭವಾನಿ ಚಿದಾನಂದ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸವಣೂರು ಕ್ಷೇತ್ರದ ರಾಜೇಶ್ವರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ಪಡೆಯಲಿದ್ದಾರೆ ಎಂದೇ ಬಿಂಬಿತವಾಗಿದ್ದ ರಾದಾಕೃಷ್ಣ ಬೋರ್ಕರ್‌ರನ್ನು ಕೊನೆಗಳಿಗೆಯಲ್ಲಿ ಕೈ ಬಿಟ್ಟಿರುವ ಬಿಜೆಪಿ ಮುಖಂಡರು ಮಹಿಳೆಯರಿಬ್ಬರಿಗೆ ಅವಕಾಶ ಕಲ್ಪಿಸಿದ್ದಾರೆ. ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶನಿವಾರ ತಾ.ಪಂನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಭಾರ ಉಪವಿಭಾಗಾಧಿಕಾರಿ ಪ್ರಮೀಳಾರ ನೇತೃತ್ವದಲ್ಲಿ ನಡೆಯಿತು.
ಒಟ್ಟು 24 ಸ್ಥಾನಗಳ ಪೈಕಿ ಬಿಜೆಪಿ 16 ಮತ್ತು ಕಾಂಗ್ರೆಸ್ 8 ಸದಸ್ಯ ಬಲ ಹೊಂದಿದೆ. ಹಿಂದುಳಿದ ವರ್ಗ ‘ಎ’ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೆಯ್ಯೂರು ಕ್ಷೇತ್ರದ ಭವಾನಿ ಚಿದಾನಂದ ಮತ್ತು ಉಪ್ಪಿನಂಗಡಿ ಸುಜಾತಕೃಷ್ಣ ಹಾಗೂ ಕಾಂಗ್ರೆಸ್‌ನಿಂದ ಸರ್ವೆ ಕ್ಷೇತ್ರದ ಪರಮೇಶ್ವರ ಭಂಡಾರಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಬಿಜೆಪಿಯ ಸುಜಾತಾ ಕೃಷ್ಣ ನಾಮಪತ್ರ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಭವಾನಿ ಚಿದಾನಂದ ಮತ್ತು ಪರಮೇಶ್ವರ ಭಂಡಾರಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕೈ ಎತ್ತುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭವಾನಿ ಚಿದಾನಂದ 16 ಮತಗಳನ್ನು ಪಡೆದು ವಿಜಯಿಯಾದರು.
ಭವಾನಿ ಚಿದಾನಂದ ಎರಡನೆ ಬಾರಿಗೆ ತಾ.ಪಂ. ಸದಸ್ಯರಾಗಿ ಆಯ್ಕೆಗೊಂಡಿದ್ದರು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಾಜೇಶ್ವರಿ ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಅವರ ಅವಿರೋಧ ಆಯ್ಕೆ ನಡೆಯಿತು. ರಾಜೇಶ್ವರಿ ತಾ.ಪಂ. ಮಾಜಿ ಸದಸ್ಯ ಸೋಮನಾಥ ಕುಮಾರ ಮಂಗಲ್ಟ ಪುತ್ರಿ.
ಚುನಾವಣಾ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಸಣ್ಣರಂಗಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪಾಲ್ಗೊಂಡಿದ್ದರು. ತಾ.ಪಂ. ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಉಷಾ ಅಂಚನ್, ಮೀನಾಕ್ಷಿ ಮಂಜುನಾಥ್, ವೈ.ಕುಸುಮಾ , ಬಾಬು, ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ ಅವರು ನೂತನವಾಗಿ ಆಯ್ಕೆಯಾದ ಅದ್ಯಕ್ಷೆ ಮತ್ತು ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.
ಪ್ರಾಮಾಣಿಕ ಪ್ರಯತ್ನ: ಭವಾನಿ
ಪುತ್ತೂರು ತಾಲೂಕನ್ನು ಅಭಿವೃದ್ಧಿಯ ಮೂಲಕ ಮಾದರಿ ತಾಲೂಕನ್ನಾಗಿಸಲು ಪ್ರಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದು ನೂತನ ಅಧ್ಯಕ್ಷೆ ಭವಾನಿ ಚಿದಾನಂದ ತಿಳಿಸಿದರು.
ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಅಧ್ಯಕ್ಷೆ ಆಗಿದ್ದೇನೆ ಎಂದು ಹೂವಿನ ಹಾರ ಹಾಕಿದರೆ ಸಾಲದು, ಕೇವಲ ಬಾಯಿಂದ ಹೇಳಿದರೆ ಸಾಲದು, ಅಭಿವೃದ್ಧಿಗೆ ಎಲ್ಲರ ಸಹಕಾರ ಬಹುಮುಖ್ಯ ಎಂದರು. ಅಧ್ಯಕ್ಷ ಸ್ಥಾನ ನಿರೀಕ್ಷಿರಲಿಲ್ಲ ಎಂದು ಅವರು ಈ ಸಂದರ್ದಲ್ಲಿ ತಿಳಿಸಿದರು.
ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ: ರಾಜೇಶ್ವರಿ
ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದು ಬೇಡ. ಎಲ್ಲರೂ ಪಕ್ಷ ರಾಜಕೀಯ ಮರೆತು, ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಉಪಾಧ್ಯಕ್ಷೆ ರಾಜೇಶ್ವರಿ ಅವರು ವಿನಂತಿಸಿಕೊಂಡರು.
ಕೊನೇ ಗಳಿಗೆಯಲ್ಲಿ ತಪ್ಪಿದ ಅಧ್ಯಕ್ಷ ಹುದ್ದೆ:
ಪುತ್ತೂರು ತಾಪಂನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದೇ ಬಿಂಬಿತವಾಗಿದ್ದ ಸದಸ್ಯ ರಾಧಾಕೃಷ್ಣ ಬೋರ್ಕರ್‌ಗೆ ಕೊನೇ ಗಳಿಗೆಯಲ್ಲಿ ಅವಕಾಶವನ್ನು ನೀಡದೆ ಇಬ್ಬರು ಮಹಿಳೆಯರಿಗೆ ಅಧಿಕಾರವನ್ನು ಹಂಚುವ ಮೂಲಕ ಪಕ್ಷದ ನಾಯಕರು ಕೈ ಬಿಟ್ಟಿದ್ದಾರೆ.
ಪುತ್ತೂರು ತಾಪಂ ಅಧ್ಯಕ್ಷ ಹುದ್ದೆ ಪ್ರಥಮ ಪಟ್ಟಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಮೀಸಲಾತಿ ಬಂದಾಗಿನಿಂದ ಸದಸ್ಯ ರಾಧಾಕೃಷ್ಣ ಬೋರ್ಕರ್ ಮತ್ತು ಸಾಜ ರಾಧಾಕೃಷ್ಣ ಆಳ್ವ ಇಬ್ಬರೂ ಅಧ್ಯಕ್ಷ ಗಾದಿಗಾಗಿ ಪಕ್ಷದ ಮೇಲೆ ಒತ್ತಡ ಹೇರಿದ್ದರು. ಇವರೊಳಗೆ ಗುದ್ದಾಟ ಇರುವಾಗಲೇ ಬೋರ್ಕರ್‌ಗೆ ಅಧ್ಯಕ್ಷ ಹುದ್ದೆ ಸಿಗಲಿದೆ ಎಂಬ ವಿಶ್ವಾಸ ಕಾರ್ಯಕರ್ತರಿಗೆ ಇತ್ತು. ಸಂಘ ಪರಿವಾರದಿಂದ ಬಂದಿರುವ ಬೋರ್ಕರ್ ಈ ಹಿಂದೆ ಒಂದು ಬಾರಿ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆಗಳಿತ್ತು.
ಸಾಜ ರಾಧಾಕೃಷ್ಣ ಆಳ್ವರೂ ಮಾಜಿ ಜಿ.ಪಂ ಸದಸ್ಯರಾಗಿದ್ದು, ಬಿಜೆಪಿ ಕ್ಷೇತ್ರ ಸಮಿತಿಯಲ್ಲಿ ಕಾರ್ಯದರ್ಶಿಯೂ ಆಗಿರುವ ಕಾರಣ ಅವರಿಗೂ ಅಧ್ಯಕ್ಷ ಸ್ಥಾನ ಸಿಗುವ ರವಸೆಗಳಿತ್ತು. ಈ ನಡುವೆ ತಾ.ಪಂ ಮೀಸಲಾತಿ ಹಿಂದುಳಿದ ವರ್ಗ ‘ಎ’ ಸ್ಥಾನಕ್ಕೆ ಬದಲಾವಣೆಗೊಂಡಿತ್ತು. ಇದರಿಂದಾಗಿ ರಾಧಾಕೃಷ್ಣ ಬೋರ್ಕರ್‌ರಿಗೆ ರಾದಾಕೃಷ್ಣ ಆಳ್ವರ ಸ್ಪರ್ಧೆಯಿಲ್ಲದೆ ನಿರಾಂತಕವಾಗಿದ್ದರು. ಆದರೆ ಪಕ್ಷದ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ಅವರನ್ನು ಬದಲಾವಣೆ ಮಾಡಿರುವುದು ಮಾತ್ರ ಕುತೂಹಲ ಮೂಡಿಸಿದೆ.