ಹಣ ಮಾತನಾಡಿದಾಗ ಸತ್ಯ ಸುಮ್ಮನಿರಬೇಕಾದ ಸ್ಥಿತಿ ನಮ್ಮಲ್ಲಿದೆ: ಕೆ.ಪಿ.ಅಹ್ಮದ್ ಹಾಜಿ
ಪುತ್ತೂರು, ಮೇ 7: ಕುಡಿತ, ಮಾದಕ ದ್ರವ್ಯ ಸೇವನೆ, ಬಡ್ಡಿಗಳಂತಹ ಹರಾಂ ವ್ಯವಸ್ಥೆಗಳು ಇದೀಗ ಸಮುದಾಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹಣ ಮಾತನಾಡಿದಾಗ ಸತ್ಯ ಸುಮ್ಮನಿರಬೇಕಾದ ಸ್ಥಿತಿ ನಮ್ಮಲ್ಲಿದೆ. ಇದು ಬದಲಾವಣೆಗೊಂಡು ಇಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಜವಾಬ್ದಾರಿಯುತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಹೇಳಿದ್ದಾರೆ.
ಪುತ್ತೂರು ಕರವಡ್ತ ವಲಿಯುಲ್ಲಾಹಿ ತಂಙಳ್‌ರ ಉರೂಸ್ ಸಮಾರಂದ ಪ್ರಯುಕ್ತ ಪುತ್ತೂರು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆದ ಉಲಮಾ-ಉಮರಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಲಮಾ ಮತ್ತು ಉಮರಾಗಳಿಗೆ ಸಮುದಾಯದ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ದಾರಿ ತಪ್ಪುತ್ತಿರುವ ಸಮುದಾಯವನ್ನು ಸರಿದಾರಿಗೆ ತರುವಲ್ಲಿ ಇವರು ಶ್ರಮ ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಯಾವುದೋ ಕಾರಣಕ್ಕೆ ತಪ್ಪುಮಾಡಿ ಜೀವನ ಪರ್ಯಂತ ಕಷ್ಟ ಅನುಭವಿಸುವ ಅದೆಷ್ಟೋ ಯುವಕರಿದ್ದಾರೆ. ಇದು ಅವರ ಅರಿವಿನ ಕೊರತೆಯ ಕಾರಣದಿಂದ ಮಾಡಿದ ತಪ್ಪುಗಳಾಗಿರಬಹುದು. ಆದರೆ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳಿದ್ದರೂ ಮುಸ್ಲಿಮ್ ಸಮುದಾಯದ ಮಕ್ಕಳು ಇಂದಿಗೂ ಶಿಕ್ಷಣ ವಂಚಿತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಬಡತನ, ಅನಕ್ಷರತೆ, ವರದಕ್ಷಿಣೆ, ವೌಢ್ಯತೆಗಳ ಕಾರಣದಿಂದಾಗಿ ಸಮುದಾಯವು ಅಭಿವೃದ್ಧಿ ವಂಚಿತವಾಗಿದ್ದು, ಈ ಬಗ್ಗೆ ಚಿಂತನೆ ನಡೆಯಬೇಕಾಗಿದೆ ಎಂದರು.
ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಅಧ್ಯಕ್ಷ ಕಮ್ಮಾಡಿ ಇಬ್ರಾಹೀಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಮಸೀದಿ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ದುವಾ ನೆರವೇರಿಸಿದರು. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಕಾರ್ಯದರ್ಶಿ ಕೊಯ್ಯೋಡು ಪಿ.ಪಿ. ಉಮರ್ ಮುಸ್ಲಿಯಾರ್ ಮುಖ್ಯ ಬಾಷಣ ಮಾಡಿದರು.
ಕುಂಬ್ರ ಕೆಐಸಿ ಮೆನೇಜರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಮಾಜಿ ಅಧ್ಯಕ್ಷ ಪಿ.ಬಿ.ಹಸನ್ ಹಾಜಿ ಪುತ್ತೂರು, ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ ಅಝೀಝ್ ಬುಶ್ರಾ, ನ್ಯಾಯವಾದಿ ಫಝಲ್ ರಹೀಂ , ಕೆ.ಎಂ. ಬಾವಾಹಾಜಿ, ಅಬ್ದುಲ್ಲತೀಪ್ ಪುತ್ತೂರು, ಅಬ್ದುರ್ರಹ್ಮಾನ್ ಆರಝಾದ್ ದರ್ಬೆ, ಯಾಕೂಬ್ ಹಾಜಿ ದರ್ಬೆ , ಜಮಾಅತ್ ಮಾಜಿ ಕಾರ್ಯದರ್ಶಿ ಹುಸೈನ್ ಕೆನರಾ ಮತ್ತಿತರರು ಉಪಸ್ಥಿತರಿದ್ದರು.
ಅನ್ಸಾರುದ್ದೀನ್ ಜಮಾಅತ್ ಕಾರ್ಯದರ್ಶಿ ಎಲ್.ಟಿ ರಝಾಕ್ ಸ್ವಾಗತಿಸಿದರು. ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ರಶೀದ್ ಹಾಜಿ ಪರ್ಲಡ್ಕ ವಂದಿಸಿದರು.