ಕಾರ್ಯಕ್ಷಮತೆ ಇಲ್ಲದ ಸಿಬ್ಬಂದಿಯನ್ನು ವರ್ಗಾಯಿಸಿ
ಮುಂಡಗೋಡ, ಮೇ 7: ಮುಂಡಗೋಡ ಪಟ್ಟಣ ಪಂಚಾಯತ್‌ನ ಸಾಮಾನ್ಯ ಸಭೆ ರಫೀಕ್ ಇನಾಮದಾರ ಅಧ್ಯಕ್ಷತೆಯಲ್ಲಿ ಪಪಂ ಸಭಾಭವನದಲ್ಲಿ ಶನಿವಾರ ಜರಗಿತು.
ಪಟ್ಟಣ ಪಂಚಾಯತ್ ಕಾಳಜಿ ಕುರಿತು ವಿಶೇಷ ಅನುದಾನದಲ್ಲಿ ಶಾಸಕರು ಮುಂಡಗೋಡ ಪಟ್ಟಣಕ್ಕೆ 3 ಕೋಟಿ ರೂ. ಮಂಜೂರು ಮಾಡಿಸಿಕೊಂಡು ಬಂದಿದಕ್ಕೆ ಪಟ್ಟಣ ಪಂಚಾಯತ್‌ನಿಕಟಪೂರ್ವ ಅಧ್ಯಕ್ಷ ಶಾಸಕರನ್ನು ಅಭಿನಂದಿಸಬೇಕು ಎಂದು ಹೇಳಿದಾಗ ಒಕ್ಕೊರಲಿನಿಂದ ಶಾಸಕರನ್ನು ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದರು.
3 ಕೋಟಿ ರೂ. ಅನುದಾನದ ಹಣವನ್ನು ಪಪಂ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳ ಕಾಮಗಾರಿಗೆ ತಲಾ 18 ಲಕ್ಷ ರೂ. ವಿನಿಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ 12 ಲಕ್ಷ ರೂ. ಗಳನ್ನು ವಿಶೇಷ ಕಾಮಗಾರಿಗಳು ಇದ್ದ ಕಡೆಗಳಲ್ಲಿ ವಿನಿಯೋಗಿಸಲು ತಿರ್ಮಾನಿಸಲಾಯಿತು
ಅಂಬೇಡ್ಕರ್, ವಾಲ್ಮೀಕಿ ಭವನ ನಿರ್ಮಾಣಕ್ಕೆ ಡಾ. ಕಟ್ಟಿಮನಿಯವರ 5 ಗುಂಟೆ ಸ್ಥಳ ಕೊಡಲು ಪ್ರಸ್ತಾಪಿಸಲಾಯಿತು. ಮತ್ತೊಂದು ಸ್ಥಳವಾದ ಮಿನಿ ವಿಧಾನ ಸೌಧದ ಹಿಂದೆ ಇರುವ ಅರಣ್ಯ ಇಲಾಖೆಗೆ ಒಳಪಡುವ ಜಾಗದ ಕುರಿತು ಚರ್ಚಿಸಲಾಯಿತು. ಈಗ ಇರುವ ಅಂಬೇಡ್ಕರ್ ಭವನ ಅಭಿವೃದ್ದಿಪಡಿಸಲು ತೀರ್ಮಾನಿಸಲಾಯಿತು
ಕಲಾಲ ಓಣಿಯಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯ ಹೊರಣ ಹೊರಗೆ ಬಂದಿರುವ ಕಾರಣದಿಂದ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ನಿರ್ಮಿಸಿಕೊಡಲು ಹೇಳಲಾಗಿದೆ. ಗುತ್ತಿಗೆದಾರ ನಿಷ್ಕಾಳಜಿ ತೋರಿದರೆ ಗುತ್ತಿಗೆದಾರನಿಗೆ ನೀಡಲಾಗುವ ಹಣದಿಂದ ಪಪಂ ರಸ್ತೆ ಅಭಿವೃದ್ಧಿಪಡಿಸಲು ತೀರ್ಮಾನ ಕೈಗೊಳ್ಳಲಾಯಿತು.
ನೀರು ಶುದ್ಧೀಕರಣ ಘಟಕದಿಂದ ಸಾರ್ವಜನಿಕರಿಗೆ 1ರೂ. ಗೆ 5 ಲೀಟರ್ ನೀರು ಪಡೆಯಬಹುದಾಗಿದ್ದು ಇಲ್ಲಿಂದ ಸುಮಾರು ಜನರು ನೀರು ಕೊಂಡಯ್ಯುತ್ತಿದ್ದರೂ ಹಣ ಮಾತ್ರ ಸರಿಯಾಗಿ ಜಮಾ ಆಗುತ್ತಿಲ್ಲ ಎಂದು ಪಪಂ ಸದಸ್ಯ ಅಲ್ಲಿಖಾನ ಪಠಾಣ ಆರೋಪಿಸಿದರು. ಅಲ್ಲದೆ ಪಪಂನಲ್ಲಿ ಕೆಲ ಸಿಬ್ಬಂದಿ ಜನಪ್ರತಿನಿಧಿಗಳ ಮಾತು ಕೇಳದೆ ಅಗೌರವ ತೋರಿಸುತ್ತಿದ್ದಾರೆ. ಕೆಲ ಸಿಬ್ಬಂದಿ ತಮ್ಮ ಅರ್ಹತೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರಿಗೆ ಕೊಟ್ಟ ಖಾತೆಗಳು ಹೆಚ್ಚಾಗಿರುವುದರಿಂದ ಪಪಂನಲ್ಲಿ ಜನಪ್ರತಿನಿಧಿಗಳು ಮಾಹಿತಿ ಕೇಳಿದರೂ ಪಡೆಯಲಾಗುತ್ತಿಲ್ಲ್ಲ. ಅಂತಹ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ಎಂದು ಹೇಳಿದಾಗ ಅದಕ್ಕೆ ಕೆಲ ಪಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಪಪಂ ಸದಸ್ಯ ಸಂಜು ಪೀಶೆ ಮಾತನಾಡಿ, ಜೆಸಿಬಿ ಚಾಲಕನನ್ನು ಬದಲಾಯಿಸಿ. ಆತನ ಕಾರ್ಯವೈಖರಿ ಸರಿಯಾಗಿಲ್ಲ ಎಂದಾಗ ಬೇರೆ ಚಾಲಕ ಬರುವವರೆಗೂ ಮುಂದುವರಿಸಲು ಪಪಂ ಹಿರಿಯ ಸದಸ್ಯ ರಾಬರ್ಟ್ ಲೋಬೋ ಹೇಳಿದರು.
ಸಭೆಯಲ್ಲಿ ಎಲ್ಲ 16 ಚುನಾಯಿತ ಸದಸ್ಯರು, 3 ನಾಮ ನಿರ್ದೇಶಿತ ಸದಸ್ಯರು ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು