×
Ad

ರಾಣಿ ಅಬ್ಬಕ್ಕ ಶೋಷಿತ ಮಹಿಳೆಯರಿಗೆ ಪ್ರೇರಣಾ ಶಕ್ತಿ: ಮಂಜುಳಾ ಮಾನಸ

Update: 2016-05-07 21:56 IST

ಮಂಗಳೂರು, ಮೇ 7: ರಾಣಿ ಅಬ್ಬಕ್ಕನ ನೆನಪು ಈ ನಾಡಿನ ಜಾತ್ಯತೀತ ನೆಲೆಯ ಮಹಿಳಾ ಹೋರಾಟದ ಸಾಕ್ಷಿ ಪ್ರಜ್ಞೆಯಾಗಿ ಈ ನಾಡಿನ ಶೋಷಿತ ಮಹಿಳೆಯರಿಗೆ ಪ್ರೆರಣಾ ಶಕ್ತಿಯಾಗಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದ್ದಾರೆ.

ಅವರು ಇಂದು ತೊಕ್ಕೊಟ್ಟಿನ ಯುನಿಟಿ ಸಭಾಂಗಣದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ‘ರಾಣಿ ಅಬ್ಬಕ್ಕ ಉತ್ಸವ 2016’ನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮ, ಜಾತಿ ಹೆಸರಿನಲ್ಲಿ ನಾಡು ಹೊತ್ತಿ ಉರಿಯುತ್ತಿರುವ ಕಾಲಘಟ್ಟದಲ್ಲಿ ಈ ನಾಡಿನ ರಕ್ಷಣೆಗಾಗಿ ಎಲ್ಲಾ ಜಾತಿ ಸಮುದಾಯದ ಜನರನ್ನು ಹೊಂದಿದ್ದ ಸೈನ್ಯದೊಂದಿಗೆ ಪೊರ್ಚುಗೀಸರ ವಿರುದ್ಧ ಹೋರಾಡಿದ ವೀರ ಮಹಿಳೆಯ ಚರಿತ್ರೆಯು ಮಹಿಳಾ ದೌರ್ಜನ್ಯ ,ಲಿಂಗಾನುಪಾತದ ಕುಸಿತ, ನೈತಿಕ ಪೊಲೀಸ್ ಗಿರಿ, ವರದಕ್ಷಿಣೆ ಕಿರುಕುಳ ಮೂಲಕ ಶೋಷಣೆಗೊಳಗಾಗುತ್ತಿರುವ ಮಹಿಳೆಯರಿಗೆ ಸ್ಪೂರ್ತಿಯಾಗಬೇಕಾಗಿದೆ ಎಂದು ಮಂಜುಳಾ ಮಾನಸ ತಿಳಿಸಿದರು.

ಅಬ್ಬಕ್ಕನ ಕಾಲಘಟ್ಟದಿಂದ ಈ ನಾಡಿನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುತ್ತಿದ್ದಲ್ಲಿ, ಅವರನ್ನು ಶೋಷಿಸದೇ ಇರುತ್ತಿದ್ದರೆ, ಇಂದು ನೂರು ಅಬ್ಬಕ್ಕ, ನೂರಾರು ಝಾನ್ಸಿ ರಾಣಿಯಂತಹ ಮಹಿಳೆಯರು ನಮ್ಮ ನಡುವೆ ಇರುತ್ತಿದ್ದರು.ಆದರೆ ಪರಿಸ್ಥಿತಿ ಹಾಗಿಲ್ಲ. ಹುಟ್ಟುವ ಮಗು ಹೆಣ್ಣು ಎಂದು ತಿಳಿದಾಗ ಆ ಮಗುವನ್ನು ಭ್ರೂಣದಲ್ಲಿಯೇ ಕೊಲ್ಲುವ ಮನೋಸ್ಥಿತಿಯ ಸಮಾಜ ನಮ್ಮ ಮುಂದಿರುವ ಕಾರಣದಿಂದ ಲಿಂಗಾನುಪಾತ ಕಡಿಮೆಯಾಗುತ್ತಾ ಸಾಗಿದೆ.ವರದಕ್ಷಿಣೆ ಸಾವು ಸಂಭವಿಸುತ್ತಿದೆ. ಅನ್ನ,ಅಕ್ಷರ,ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ.ಅಬ್ಬಕ್ಕ ಉತ್ಸವದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ಠರಾವು ಮಂಡಿಸಿ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಮಂಜುಳಾ ಮಾನಸ ಕರೆ ನೀಡಿದರು.

ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರು, ಪಂಪ್‌ವೆಲ್ ಬಳಿ ಅಬ್ಬಕ್ಕ ವೃತ್ತ ರಚನೆ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಪಠ್ಯ ಪುಸ್ತಕಗಳಲ್ಲಿ ಅಬ್ಬಕ್ಕನ ಪಠ್ಯ ಸೇರಿಸಬೇಕು, ಯುದ್ಧ ನೌಕೆಗೆ ಅಬ್ಬಕ್ಕ ಹೆಸರು, ಬೆಂಗಳೂರಿನ ಕ್ವೀನ್ಸ್‌ರೋಡ್‌ಗೆ ಅಬ್ಬಕ್ಕ ಹೆಸರು ಇಡಬೇಕೆಂಬ ಅಬ್ಬಕ್ಕ ಸಮಿತಿಯ ಆಶಯವನ್ನು ಸರಕಾರದ ಗಮನಕ್ಕೆ ತರುವುದಾಗಿ ಮಂಜುಳಾ ಮಾನಸ ತಿಳಿಸಿದರು.

ಅಬ್ಬಕ್ಕ ಭವನ ನಿರ್ಮಾಣಕ್ಕೆ ಸರಕಾರದಿಂದ ನಾಲ್ಕೂವರೆ ಕೋಟಿ ರೂ.: ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಸರಕಾರದಿಂದ ನಾಲ್ಕೂವರೆ ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

ಅಬ್ಬಕ್ಕನ ಚರಿತ್ರೆ ಈ ನಾಡಿನ ಜನರ ಸ್ವಾಭಿಮಾನ, ಸವಾಲನ್ನು ಎದುರಿಸುವ ಅಚಲ ವಿಶ್ವಾಸದ ವ್ಯಕ್ತಿತ್ವದ ಪ್ರತೀಕವಾಗಿದೆ.ಅಬ್ಬಕ್ಕ ಉತ್ಸವದ ಹೆಸರಿನಲ್ಲಿ ಮಹಿಳಾ ಸಶಕ್ತತೆಯ ಕೆಲಸ ನಡೆಯಲು ಉತ್ಸವ ಪ್ರೇರಣೆಯಾಗಲಿ ಎಂದು ಯು.ಟಿ.ಖಾದರ್ ಶುಭ ಹಾರೈಸಿದರು.

ರಾಣಿ ಅಬ್ಬಕ್ಕ ಜಿಲ್ಲೆಯ ಗೌರವಯುತ ಮಹಿಳೆಯ ಪ್ರತೀಕ: ರಾಣಿ ಅಬ್ಬಕ್ಕ ಮೂಡುಬಿದಿರೆಯ ರಾಜಕುಮಾರಿಯಾಗಿ ಉಳ್ಳಾಲದ ರಾಣಿಯಾಗಿ ನಾಡಿನ ರಕ್ಷಣೆಗಾಗಿ ಬ್ರಿಟೀಷರಿಗಿಂತಲೂ ಮೊದಲು ದೇಶಕ್ಕೆ ವಲಸೆ ಬಂದ ಪೋರ್ಚುಗೀಸರ ವಿರುದ್ಧ ಹೋರಾಡಿದ ಹೆಮ್ಮೆಯ ಮಹಿಳೆ ಎನ್ನುವುದು ಈ ನಾಡಿನ ಗೌರವವಾಗಿದೆ .ಈ ನಾಡಿನಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಮಾನ ಇತ್ತು ಎನ್ನುವುದಕ್ಕೆ ಅಬ್ಬಕ್ಕ ಉದಾಹರಣೆಯಾಗಿದ್ದಾರೆ ಎಂದು ರಾಜ್ಯ ಯುವಜನ ಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಶಾಸಕರಾದ ಐವನ್ ಡಿ ಸೋಜ, ಶಕುಂತಳಾ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಉಳ್ಳಾಲ ಪುರಸಭಾ ಅಧ್ಯಕ್ಷ ಹುಸೈನ್ ಕುಂಞ ಮೋನು ,ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಪಂ ಸದಸ್ಯೆ ಧನಲಕ್ಷ್ಮೀ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀವಿದ್ಯಾ,ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಎಸ್ ಶಾಸ್ತ್ರಿ, ಸಮಿತಿಯ ಪದಾಧಿಕಾರಿಗಳಾದ ಭರತ್ ಕುಮಾರ್, ಹೈದರ್ ಪರ್ತಿಪ್ಪಾಡಿ, ಸುಹಾಸಿನಿ ಬಬ್ಬು ಕಟ್ಟೆ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಯು.ಪಿ.ಅಲಿಯಬ್ಬ, ತೋನ್ಸೆ ಪುಷ್ಕಳ ಕುಮಾರ್, ಕೆ.ಎಂ.ಕೆ ಮಂಜನಾಡಿ, ಭರತ್ ಕುಮಾರ್, ಅಬ್ದುಲ್ ಅಜೀಜ್ ಹಕ್, ಉಳ್ಳಾಲ ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಉತ್ಸವ ಸಮಿತಿಯ ಇತರ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿಯ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಜಯರಾಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News