ಮಲ್ಪೆ ಬೀಚ್: 1.27ಕೋಟಿ ಕಾಮಗಾರಿಗಳ ಉದ್ಘಾಟನೆ
ಉಡುಪಿ, ಮೇ 7: ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ ಮಲ್ಪೆ ಬೀಚ್‌ನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ಶನಿವಾರ ಮಲ್ಪೆಯಲ್ಲಿ ಆಯೋಜಿಸಲಾಗಿತ್ತು.
ಮಲ್ಪೆ ಕಡಲ ಕಿನಾರೆಯಲ್ಲಿ ಪ್ರವಾಸಿ ಬೋಟ್ ಜೆಟ್ಟಿ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿ, ಮಲ್ಪೆ ಬೀಚ್‌ನಲ್ಲಿ ಮೂಲಭೂತ ಸೌಕರ್ಯದ ವಿವಿಧ ಅಭಿವೃದ್ಧಿ ಕಾಮಗಾರಿ, ಬೀಚ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿ ದಂತೆ ಒಟ್ಟು 1,27,25,000ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸೈಂಟ್ ಮೇರಿಸ್ ದ್ವೀಪದಲ್ಲಿ ವೈಟಿಂಗ್ ಲಾಂಜ್ ನಿರ್ಮಾಣ, ಬೀಚ್‌ನಲ್ಲಿ ಸ್ವಾಗತ ದ್ವಾರ ನಿರ್ಮಾಣ, ದಾರಿದೀಪ ಅಳವಡಿ ಸುವ ಕಾಮಗಾರಿ, ರಿಕ್ಷಾ ನಿಲ್ದಾಣ ಸೇರಿದಂತೆ ಒಟ್ಟು 20.05ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪೌರಾಯುಕ್ತ ಡಿ.ಮಂಜು ನಾಥಯ್ಯ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.
ಬೋಟ್ ಚಲಾಯಿಸಿದ ಶಾಸಕರು!
ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅಧಿಕಾರಿಗಳು, ವಿವಿಧ ಜನ ಪ್ರತಿನಿಧಿಗಳೊಂದಿಗೆ ತೆರಳಿ ವೀಕ್ಷಿಸಿದರು. ದ್ವೀಪದಿಂದ ಮಲ್ಪೆ ಕಡಲ ಕಿನಾರೆಗೆ ಮರಳುವಾಗ ಸಮುದ್ರ ಮಧ್ಯೆ ಶಾಸಕ ಪ್ರಮೋದ್ ಮಧ್ವರಾಜ್ ಬೋಟ್ ಚಲಾಯಿಸುವ ಮೂಲಕ ಅಚ್ಚರಿ ಮೂಡಿಸಿದರು. ಸುಮಾರು ಎರಡು ಕಿ.ಮೀ. ದೂರ ಸ್ವತಃ ಅವರೇ ಬೋಟ್ ಚಲಾಯಿಸಿದರು.