ಮೂಡುಬಿದಿರೆ: ಅಂತರ್‌ಕಾಲೇಜು ಯುವಜನ ಉತ್ಸವ ‘ಚಕ್ರವ್ಯೂಹ’ಕ್ಕೆ ಚಾಲನೆ
ಮೂಡುಬಿದಿರೆ, ಮೇ 7: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಘಟಿಸಿದ ಬೆಳಗಾವಿ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ 16ನೆ ವರ್ಷದ ಅಂತರ್ ಕಾಲೇಜು ಯುವಜನ ಉತ್ಸವ ‘ಚಕ್ರವ್ಯೂಹ’ ವನ್ನು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಸಾಹಿತಿ, ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯುವಜನರ ಮನಸ್ಸಿನಾಳದಲ್ಲಿ ತಲ್ಲಣಗಳಿರುತ್ತವೆ, ಪ್ರತಿಬೆಯ ಗಣಿಯೇ ಇರುತ್ತದೆ. ಆದರೆ ಮೇಲ್ನೋಟಕ್ಕೆ ಉಡಾಪೆಗಳು ಕಾಣಿಸಬಹುದು. ಆದರೆ ನಾನೇನು, ನಾನು ಈ ದೇಶಕ್ಕೆ ಏನು ಕೊಡುಗೆ ಕೊಡಬಲ್ಲೆ ಎಂಬ ಚಿಂತನೆ ನಡೆಯುತ್ತಲೇ ಇರುತ್ತದೆ. ಇಂಥದ್ದಕ್ಕೆಲ್ಲ ಪೂರಕವಾಗಿ ಸಾಂಪ್ರದಾಯಿಕ ಶಿಕ್ಷಣದ ಜತೆ ಜತೆಗೇ ಕಲೆ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳುವ ವಿವೇಕ, ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯನ್ನು ಯುವಜನರು ಹೊಂದಿರಬೇಕು’ ಎಂದು ಹೇಳಿದ ಅವರು ನಿಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಿ, ನಿಮ್ಮೊಳಗಿನ ಶಕ್ತಿಯನ್ನು ವಿಕಾಸಗೊಳಿಸಿರಿ’ ಎಂದು ಯುವಜನರಿಗೆ ಕರೆ ನೀಡಿದರು.
ವಿಟಿಯು ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಬಲರಾಗಿರುವ ಜತೆಜತೆಗೇ ಒಂದಿಷ್ಟು ಸಮಯ ಹೊಂದಿಸಿಕೊಂಡು ಕ್ರೀಡೆ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಎಷ್ಟು ಬೇಕೋ ಅಷ್ಟು ಆಸಕ್ತಿ ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ಇಷ್ಟಕಾಮ್ಯ’ದ ನಟಿ, ಇಂಜಿನಿಯರಿಂಗ್ ಪದವೀಧರೆ, ಮಂಗಳೂರಿನ ಕಾವ್ಯಾ ಶೆಟ್ಟಿ, ಟ್ರಸ್ಟಿ ವಿವೇಕ್ ಆಳ್ವ , ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎ.ಜಿ. ಬು ಜುರ್ಕೆ ಉಪಸ್ಥಿತರಿದ್ದರು. ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಸ್ವಾಗತಿಸಿದರು.
ಇ ಆ್ಯಂಡ್ ಸಿ ಪ್ರಾಧ್ಯಾಪಕಿ ಶ್ರುತಿ ಕುಮಾರಿ ನಿರೂಪಿಸಿದರು. ಪ್ರಾಚಾರ್ಯ ಡಾ.ಪೀಟರ್ ಫೆರ್ನಾಂಡಿಸ್ ವಂದಿಸಿದರು.