×
Ad

ಇಳಂತಿಲ: ನದಿ ದಡದಲ್ಲಿದ್ದ ಅನಧಿಕೃತ ಪಂಪ್‌ಸೆಟ್‌ಗಳ ತೆರವು

Update: 2016-05-07 22:47 IST

ಉಪ್ಪಿನಂಗಡಿ: ನೇತ್ರಾವತಿ ನದಿ ದಡದಲ್ಲಿ ಶನಿವಾರ ಪರಿಶೀಲನೆ ನಡೆಸಿದ ಇಳಂತಿಲ ಗ್ರಾಮ ಪಂಚಾಯತ್ ತಂಡ ನದಿ ದಡದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಪಂಪ್‌ಗಳನ್ನು ತೆರವುಗೊಳಿಸಿದ್ದು, ಅಧಿಕೃತ ಪಂಪ್‌ದಾರರಿಗೆ ಪಂಪ್ ತೆರವಿಗೆ ಮನವಿ ಮಾಡಿದೆ.

ಇಳಂತಿಲ ಗ್ರಾಮ ಪಂಚಾಯತ್‌ನ ಗಡಿಬಾಗದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಇಲ್ಲಿ 40 ಮಂದಿ ಕೃಷಿಕರು ಪರವಾನಿಗೆ ಪಡೆದು ನದಿಗೆ ಪಂಪ್ ಅಳವಡಿಸಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದ ಗ್ರಾ.ಪಂ., ಪಂಚಾಯತ್ ಅಧ್ಯಕ್ಷ ಯು.ಕೆ. ಇಸುಬು ನೇತೃತ್ವದಲ್ಲಿ ಪಂಚಾಯತ್ ಅಧಿಕಾರಿಗಳ ತಂಡ ಶನಿವಾರ ನೇತ್ರಾವತಿ ನದಿ ದಡದಲ್ಲಿ ಪರಿಶೀಲನೆ ನಡೆಸಿದ್ದು, ಈ ಸಂದರ್ ಪರವಾನಿಗೆದಾರರಿಗಿಂತಲೂ ದುಪ್ಪಟ್ಟು ಮಂದಿ ಅನಧಿಕೃತವಾಗಿ ನದಿಯಿಂದ ಕೃಷಿ ತೋಟಗಳಿಗೆ ನೀರು ಹಾಯಿಸುತ್ತಿರುವುದು ಹಾಗೂ ಕೆಲವು ಬೃಹತ್ ಕಟ್ಟಡಗಳವರು ನೇತ್ರಾವತಿ ನದಿಯಿಂದ ನೀರಿನ ಸಂಪರ್ಕ ಪಡೆದಿರುವುದು ಕಂಡು ಬಂತು.

ಅಧ್ಯಕ್ಷರ ನಿರ್ದೇಶನದಂತೆ ತಕ್ಷಣವೇ ಅನಧಿಕೃತ ಪಂಪ್‌ಗಳನ್ನು ತೆರವುಗೊಳಿಸಲಾಯಿತಲ್ಲದೆ, ಮಳೆ ಬಂದು ನದಿಯಲ್ಲಿ ನೀರು ಹರಿಯುವ ತನಕ ಪಂಪ್ ಅಳವಡಿಸದಂತೆ ಎಚ್ಚರಿಕೆ ನೀಡಿದರು. ಅಲ್ಲದೇ, ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದರಿಂದ ಕೃಷಿ ತೋಟಗಳಿಗೆ ನದಿಯ ನೀರನ್ನೆತ್ತದಂತೆ ಪರವಾನಿಗೆದಾರರಲ್ಲಿ ವಿನಂತಿಸಿದರು.

ಕಡವಿನಬಾಗಿಲು, ಕಡವಿನ ಗುಡ್ಡೆ, ಪೆದಮಲೆ, ರಿಪಾಯಿನಗರ, ಅಂಬೊಟ್ಟು, ನೇಜಿಗಾರು ಹಾಗೂ ಪೆರ್ಲಾಪು ಮುಂತಾದ ಕಡೆ ಕುಡಿಯುವ ನೀರಿಗೆ ಆಧಾರವಾಗಿದ್ದ ಕಡವಿನಬಾಗಿಲ ಸಮೀಪ ನೇತ್ರಾವತಿ ನದಿಯಲ್ಲಿ ತೋಡಿರುವ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿಂದ ಸುಮಾರು 500 ಮೀಟರ್ ದೂರದಲ್ಲಿರುವ ಮಹಾಕಾಳಿ ಗಯದಿಂದ ಬಾವಿಯ ಬುಡಕ್ಕೆ ನೀರು ಹಾಯಿಸಿ, ಬಾವಿಯ ಒರತೆ ಹೆಚ್ಚಿಸಲು ಪಂಚಾಯತ್ ಯೋಜನೆ ರೂಪಿಸಿದೆ. ಅಲ್ಲದೇ, ನೇತ್ರಾವತಿಯಲ್ಲಿ ನೀರಿನ ಹರಿವು ನಿಂತಿದ್ದು, ಅಲ್ಲಲ್ಲಿ ನಿಂತ ನೀರಿನಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಪಂಚಾಯತ್ ಆದೇಶ ನೀಡಿದೆ. 

ಮಹಾಕಾಳಿ ಗಯದಿಂದ ಕಡವಿನಬಾಗಿಲಿನಲ್ಲಿ ಇರುವ ಇಳಂತಿಲ ಪಂಚಾಯತ್‌ನ ಬಾವಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ನೀರು ಹರಿಸಲು ಅನುಗ್ರಹ ಪಾರಂನ ಮಹಾಲಿಂಗ ಟ್ ಒಪ್ಪಿಕೊಂಡಿದ್ದು, ಜೋಗಿಬೆಟ್ಟು ಬನ್ನೆಂಗಳದ ಅಬೂಬಕ್ಕರ್ ಎಂಬವರು ತನ್ನ ತೋಟದ ಕೊಳವೆ ಬಾವಿಯೊಂದನ್ನು ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳಲು ಪಂಚಾಯತ್ ಸುಪರ್ದಿಗೆ ನೀಡಿದ್ದಾರೆ. ಈ ಮೂಲಕ ರೈತರಿಬ್ಬರು ಊರಿಗೆ ಕುಡಿಯುವ ನೀರೊದಗಿಸಲು ನೆರವಾಗಿದ್ದಾರೆ.

ಪಂಪ್‌ಗಳ ಪರಿಶೀಲನೆ ಸಂದರ್ ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ಪಯಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀಲಾ ಎಸ್. ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News