ಸರಕಾರಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಕಣ್ಣಿಡಬೇಕು: ಶಾಸಕ ಕೆ. ವಸಂತ ಬಂಗೇರ

Update: 2016-05-07 17:46 GMT

ಉಪ್ಪಿನಂಗಡಿ, ಮೇ 6: ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಅತೀ ಅಗತ್ಯ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ತಿಳಿಸಿದ್ದಾರೆ.

ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಬದ್ರಿಯಾ ಜುಮಾ ಮಸೀದಿಯ ಬಳಿ ಸಮುದಾಯ ಭವನ ಕಟ್ಟಡಕ್ಕೆ ಶಿಲಾನ್ಯಾಸಗೈದು ಅವರು ಮಾತನಾಡುತ್ತಿದ್ದರು. ಸರಕಾರದ ಸೊತ್ತು ನಮ್ಮೆಲ್ಲರದಾಗಿದ್ದು, ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಆದ್ದರಿಂದ ಸರಕಾರಿ ಕಾಮಗಾರಿಗಳು ನಮ್ಮದಲ್ಲವೆಂಬ ಭಾವನೆಯನ್ನು ಬಿಟ್ಟು ಸರಕಾರಿ ಕಾಮಗಾರಿಗಳು ನಡೆಯುತ್ತಿರುವಾಗ ಅದರ ಗುಣಮಟ್ಟದ ಬಗ್ಗೆ ಸಾರ್ವಜನಿಕರೂ ಒಂದು ಕಣ್ಣಿಡಬೇಕು. ಅಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದರೆ, ತಕ್ಷಣವೇ ಅಲ್ಲಿನ ಗ್ರಾಮಸ್ಥರು ಸಂಬಂಧಿಸಿದವರ ಗಮನಕ್ಕೆ ತಂದು ಯೋಗ್ಯ ಕಾಮಗಾರಿ ನಡೆಯಲು ಸಹಕರಿಸಿದಾಗ ಮಾತ್ರ ಅಂತಹ ಕಾಮಗಾರಿಗಳು ಉತ್ತಮವಾಗಿರಲು ಸಾಧ್ಯ ಎಂದರು.

ಜಿಪಂ ಸದಸ್ಯ ಕೆ. ಶಾಹುಲ್ ಹಮೀದ್ ಮಾತನಾಡಿ, ತುಳುನಾಡಿನ ರೈತಾಪಿ ವರ್ಗದ ಜನರ ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ಸಮುದಾಯ ಭವನಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

ಸ್ಥಳೀಯ ಜುಮಾ ಮಸೀದಿಯ ಧರ್ಮಗುರು ಸೈಯದ್ ಹಬೀಬುಲ್ಲಾ ತಂಙಳ್ ದುಆ ನೆರವೇರಿಸಿದರು.

ಜಮಾಅತ್ ಅಧ್ಯಕ್ಷ ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಂ, ಜಿಲ್ಲಾ ವಕ್ಫ್ ಮಂಡಳಿ ನಿರ್ದೇಶಕ ಖಾಸೀಂ, ಪಂಚಾಯತ್ ಸದಸ್ಯರಾದ ಅಬ್ದುರ್ರಹ್ಮಾನ್, ಆದಂ, ತೌಸೀಫ್ ಉಪಸ್ಥಿತರಿದ್ದರು.

ಸ್ಥಳೀಯರಾದ ಫಾರೂಖ್ ಮುಸ್ಲಿಯಾರ್ ಸ್ವಾಗತಿಸಿದರು. ಮುಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News