×
Ad

‘ಉಡುಪಿಯಲ್ಲಿ ಒಂದು ವಾರಕ್ಕಾಗುವಷ್ಟು ನೀರು’

Update: 2016-05-08 00:24 IST

ಉಡುಪಿ, ಮೇ 7: ಈ ಬಾರಿ ಮುಂಗಾರು ಪೂರ್ವ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲೂ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಉಡುಪಿ ನಗರಸಭಾ ವ್ಯಾಪ್ತಿಗೆ ನೀರುಣಿಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನ ಸಂಗ್ರಹದಲ್ಲಿರುವ ನೀರು ಒಂದು ವಾರ ಕಾಲ ಮಾತ್ರ ಬರುವ ನಿರೀಕ್ಷೆ ಇದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
 ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯವರೆಗೆ (ಮೇ 6) ಬಜೆ ಅಣೆಕಟ್ಟಿನಲ್ಲಿ 2.63ಮೀ. ನೀರಿದ್ದರೆ ಕಳೆದ ವರ್ಷ ಇದೇ ದಿನದಂದು 3.17 ಮೀ. ನೀರಿತ್ತು. ಇಂದು (ಮೇ 7) ಬಜೆಯಲ್ಲಿ 2.55 ಮೀ. ನೀರಿದ್ದು, ಕಳೆದ ವರ್ಷ ಇದೇ ದಿನ 3.14 ಮೀ. ನೀರಿನ ಸಂಗ್ರಹವಿತ್ತು ಎಂದವರು ವಿವರಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 0.60 ಮೀ. ನೀರು ಕಡಿಮೆ ಇದೆ. ಅಲ್ಲದೇ ಪ್ರತಿದಿನ ಆವಿಯಾಗುವ ನೀರಿನ ಪ್ರಮಾಣ ಕಳೆದ ವರ್ಷ 0.03 ಮೀ. ಆಗಿದ್ದರೆ, ಈ ಬಾರಿ ಸರಾಸರಿ 0.10 ಮೀ.ನಷ್ಟಿದೆ. ಈ ಲೆಕ್ಕದಲ್ಲಿ ಈಗಿರುವ ನೀರು ಇನ್ನು ಒಂದು ವಾರವಷ್ಟೇ ಸಾಕಾಗುವಂತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದ ಕೊನೆಗೆ ನಗರಸಭಾ ಅಧ್ಯಕ್ಷರು, ಪೌರಾಯುಕ್ತರು, ಇಂಜಿನಿಯರ್‌ಗಳು ಹಾಗೂ ಸದಸ್ಯರ ಸಭೆ ಕರೆದು ಆಗಿನ ಸ್ಥಿತಿಯ ಅವಲೋಕನ ಹಾಗೂ ಮುಂದಿನ ಕ್ರಮದ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಸ್ವರ್ಣಾ ನದಿಯ ತಗ್ಗು ಪ್ರದೇಶದಲ್ಲಿ ನಿಂತಿರುವ ನೀರನ್ನು ಪಂಪ್ ಮೂಲಕ ಹರಿಸುವ ಬಗ್ಗೆ ನಿರ್ಧರಿಸಲಾಗುವುದು.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 14 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗು ತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಸದ್ಯ ಆರು ಕಡೆಗಳಲ್ಲಿ ಮಾತ್ರ ಟ್ಯಾಂಕರ್ ನೀರು ಸರಬರಾಜು ನಡೆಯುತ್ತಿದೆ. ಉಳಿ ದೆಡೆ ನೀರಿನ ಮೂಲವನ್ನು ಸರಿಪಡಿಸಿ ನೀಡಲಾಗುತ್ತಿದೆ ಎಂದರು.
 ಹವಾಮಾನ ತಜ್ಞರ ಹೇಳಿಕೆಯಂತೆ ಕರಾವಳಿ ಜಿಲ್ಲೆಗೆ ಮೇ 30ರ ವೇಳೆಗೆ ಮಾನ್ಸೂನ್ ಕಾಲಿರಿಸಲಿದೆ. ಅಲ್ಲಿನವರೆಗೆ ನೀರಿನ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಸ್ವರ್ಣಾ ನದಿಯ ನೀರು ಸಿಗದಿದ್ದರೆ ನಗರಸಭಾ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಎಲ್ಲ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜೂನ್‌ನಲ್ಲಿ ಸರಕಾರಿ ಸಿಟಿ ಬಸ್: ಬನ್ನಂಜೆಯಲ್ಲಿರುವ ಪಿಡಬ್ಲುಡಿ ಇಲಾಖೆಗೆ ಸೇರಿದ ಎರಡೂವರೆ ಎಕರೆ ಜಾಗವನ್ನು ಕೆಎಸ್ಸಾರ್ಟಿಸಿಗೆ ಉಚಿತವಾಗಿ ನೀಡಲು ಸರಕಾರ ಒಪ್ಪಿಗೆ ನೀಡಿದ್ದು, ಅಲ್ಲೀಗ ಸುಸಜ್ಜಿತ ಅಂತರ್ಜಿಲ್ಲಾ ಸರಕಾರಿ ಬಸ್ ನಿಲ್ದಾಣ ತಲೆ ಎತ್ತಲಿದೆ ಎಂದು ಪ್ರಮೋದ್ ಹೇಳಿದರು.

ಅದೇ ರೀತಿ ಈಗ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ 34 ಸೆಂಟ್ಸ್ ಹಾಗೂ ನಗರಸಭೆಯ 7 ಸೆಂಟ್ಸ್ಸ್ ಸೇರಿ 41 ಸೆಂಟ್ಸ್ ಜಾಗವನ್ನು ಕೆಎಸ್ಸಾರ್ಟಿಸಿಗೆ ಹಸ್ತಾಂತರಿಸಲಾಗಿದ್ದು, ಅಲ್ಲಿ ಸರಕಾರಿ ಸಿಟಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಇದಕ್ಕೆ ಮೊದಲ ಹಂತದಲ್ಲಿ 5 ಕೋ.ರೂ. ಬಿಡುಗಡೆಯಾಗಿದ್ದು, ಮುಂದಿನ ಜೂನ್ ಕೊನೆಯೊಳಗೆ 30 ಬಸ್‌ಗಳಲ್ಲಿ 15 ಸರಕಾರಿ ಸಿಟಿಬಸ್ ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಉಡುಪಿಗೆ ಹೊಸದಾದ ಲೋಫ್ಲೋರ್ ಹಾಗೂ ಮಿನಿ ಬಸ್‌ಗಳು ಬರಲಿವೆ. ಮೊದಲ ಹಂತದಲ್ಲಿ 15 ಬಸ್‌ಗಳು ಸಂಚರಿಸಲಿವೆ. ಬಸ್ ಸಂಚಾರಕ್ಕೆ ಪರವಾನಿಗೆ ಸಿಕ್ಕಿದ್ದು, ವೇಳಾಪಟ್ಟಿ ಆರ್‌ಟಿಒದಿಂದ ಸಿಗಬೇಕಾಗಿದೆ ಎಂದು ಪ್ರಮೋದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸೆಲಿನಾ ಕರ್ಕಡ, ನಾರಾಯಣ ಕುಂದರ್, ಕೆಎಸ್ಸಾರ್ಟಿಸಿ ಅಧಿಕಾರಿಗಳಾದ ಚಂದ್ರಶೇಖರ್, ಗುಡಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News