ಪ್ರಧಾನಿ ಮೋದಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಫ್ಲೆಕ್ಸ್‌ಗಳ ರಾತ್ರೋರಾತ್ರಿ ತೆರವು!

Update: 2016-05-08 04:16 GMT

ಕಾಸರಗೋಡು, ಮೇ 8: ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಬೋರ್ಡ್‌ಗಳನ್ನು ಅಧಿಕಾರಿಗಳು ಶನಿವಾರ ರಾತ್ರಿ ತೆರವುಗೊಳಿಸಿದ ಘಟನೆ ನಡೆದಿದೆ.
 ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಾಸರಗೋಡಿಗೆ ಆಗಮಿಸಲಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರಿ ಕಾಸರಗೋಡಿನೆಲ್ಲೆಡೆ ಫ್ಲೆಕ್ಸ್, ಬೋರ್ಡ್‌ಗಳನ್ನು ಅಳವಡಿಸಲಾಗಿತ್ತು. ಇವುಗಳನ್ನು ಕಳೆದ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ತೆರವುಕ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ತಡೆಯಲೆತ್ನಿಸಿದರೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ.ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ ಇದ್ಯಾವುದಕ್ಕೂ ಜಗ್ಗದೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಸೇರಿದಂತೆ ಎಲ್ಲ ರೀತಿಯ ಫಲಕಗಳನ್ನು ತೆರವುಗೊಳಿಸಿದರು.
ಅದೇ ರೀತಿ ಕೇರಳ ಮತ್ತು ಕರ್ನಾಟಕದ 300ಕ್ಕೂ ಅಧಿಕ ಪೊಲೀಸರು ಕರಂದಕ್ಕಾಡ್‌ನಿಂದ ವಿದ್ಯಾನಗರ ತನಕದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಳವಡಿಸಿದ್ದ ಎಲ್ಲ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ರಾತ್ರೋರಾತ್ರಿ ತೆರವುಗೊಳಿಸಿದರು.

   ಕಾಸರಗೋಡು ಹಳೆ ಬಸ್ಸು ನಿಲ್ದಾಣ ಪರಿಸರದಲ್ಲಿ ಅಳವಡಿಸಿದ್ದ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಕರಂದಕ್ಕಾಡ್ ಟ್ರಾಫಿಕ್ ಸರ್ಕಲ್ ಬಳಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿ ಸ್ಥಾಪಿಸಲಾಗಿದ್ದ ಫ್ಲೆಕ್ಸ್ ಬೋರ್ಡ್‌ಗಳನ್ನೂ ತೆರವುಗೊಳಿಸಲು ಮುಂದಾದಾಗ ಬಿಜೆಪಿ ಕಾರ್ಯಕರ್ತರು ತಡೆದಿದ್ದರು. ಇದರಿಂದ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನೆರವಿನಿಂದ ತೆರವು ಕಾರ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News