ಪತ್ನಿಗೆ ನೀರು ನೀಡದಕ್ಕೆ ತಾನೇ ಬಾವಿ ತೋಡಿದ ದಲಿತ
ನಾಗಪುರ, ಮೇ 8: ತನ್ನ ಪತ್ನಿಗೆ ಬಾವಿಯಿಂದ ನೀರು ಸೇದಲು ಅವಕಾಶ ನಿರಾಕರಿಸಿ ಅವಮಾನವೆಸಗಿದ ಮಾಲಕನಿಗೆ ಸೆಡ್ಡು ಹೊಡೆದ ಬುಡಕಟ್ಟು ವರ್ಗದ ದಶರಥ್ ಮಂಝಿಯ ಕತೆಯಿದು.
ಈ ಸಾಧನೆ ಬೃಹತ್ ಎಂದು ಬಣ್ಣಿಸಲಾಗದಿದ್ದರೂ, ಸಮಾನತೆಯ ಹೋರಾಟದಲ್ಲಿ ಅದಮ್ಯ ಉತ್ಸಾಹವನ್ನು ಬಿಂಬಿಸುವುದಂತೂ ಸತ್ಯ. ನಾಲ್ಕೈದು ಮಂದಿ ವಾರಗಟ್ಟಲೆ ದುಡಿದು ಮಾಡುವ ಕೆಲಸವನ್ನು ಈತ ಏಕಾಂಗಿಯಾಗಿ ಮಾಡಿ ತನ್ನ ಮನೆ ಸಮೀಪದಲ್ಲೇ ಬಾವಿಯೊಂದನ್ನು ತೋಡಿ ಜಲ ಸ್ವಾವಲಂಬನೆ ಸಾಧಿಸಿ ತೋರಿಸಿದ್ದಾನೆ.
ಈಗ ಆತನ ದಲಿತ ಕೇರಿಯ ಎಲ್ಲರೂ ಈ ಬಾವಿಯಿಂದಲೇ ನೀರು ಸೇದಿ ಕೊಂಡೊಯ್ಯುತ್ತಾರೆ. ಅವರೀಗ ಬೇರೆ ಜಾತಿಯವರ ಬಾವಿಯನ್ನು ಅವಲಂಬಿಸಿಲ್ಲ.
ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಕಲಂಬೇಶ್ವರ್ ಗ್ರಾಮದ ಬಡ ಕಾರ್ಮಿಕ ಬಾಪುರಾವ್ ತಾಜ್ನಿ. ಈತ ಹಿಂದೆಂದೂ ಬಾವಿ ತೋಡಿರದಿದ್ದರೂ ಪ್ರತಿದಿನ 6 ಗಂಟೆಗಳಂತೆ 40 ದಿನಗಳ ಕಾಲ ಕೆಲಸ ಮಾಡಿ ಗಂಗೆಯನ್ನು ಒಲಿಸಿಕೊಂಡ. ಗ್ರಾಮದ ಜನರು ಯಾರೂ ಈತನ ಸಹಾಯಕ್ಕೆ ಬರಲಿಲ್ಲ. ಅವನ ಕುಟುಂಬದ ಸದಸ್ಯರೂ ಕೈಜೋಡಿಸಲಿಲ್ಲ. ಇವನಿಗೇನೋ ಹುಚ್ಚು ಹಿಡಿದಿರಬೇಕು ಎಂದೇ ಎಲ್ಲರೂ ಗೇಲಿ ಮಾಡಿದರು.
ಮೊದಲೇ ಇದ್ದ ಎರಡು ಮೂರು ಬಾವಿಗಳು ಬತ್ತಿ ಹೋಗಿದ್ದವು. ಅಂತಹ ಜಾಗದಲ್ಲಿ ಕಲ್ಲು ಬಂಡೆಗಳಿರುವ ಪ್ರದೇಶದಲ್ಲಿ ಬಾವಿ ತೋಡಲು ಹೊರಟ ಈತ ಛಲ ಬಿಡದೆ ನೀರು ಸಿಗುವ ವರೆಗೂ ಬಾವಿ ತೋಡಿದ.
ನಮಗೆ ನೀರು ಕೊಡದ ಗ್ರಾಮಸ್ಥನ ಹೆಸರು ಹೇಳಲಾರೆ. ನಮ್ಮ ಹಳ್ಳಿಯಲ್ಲಿ ಈ ಕಾರಣಕ್ಕಾಗಿ ಜಗಳ, ರಕ್ತಪಾತ ಆಗುವುದು ಬೇಡ ಎನ್ನುವ ತಾಜ್ನಿ, ನಾವು ಬಡವರು ಮತ್ತು ದಲಿತರು ಎಂಬ ಕಾರಣಕ್ಕಾಗಿಯೇ ನಮ್ಮನ್ನು ಅವಮಾನಿಸಲಾಗುತ್ತಿದೆ ಎಂದು ದೂರಿದ್ದಾನೆ.
ನಾನು ಆದಿನ ನೀರಿಗಾಗಿ ಅಂಗಲಾಚಿದೆ. ಆದರೆ ಯಾರಿಗೂ ನನ್ನ ಮೇಲೆ ಕರುಣೆ ಹುಟ್ಟಲಿಲ್ಲ. ನಂತರ ನಾನು ನೀರಿಗಾಗಿ ಇನ್ನು ಯಾರನ್ನೂ ಬೇಡಿಕೊಳ್ಳಬಾರೆಂದು ನಿರ್ಧರಿಸಿ ನಾನೇ ಬಾವಿ ತೋಡಲು ನಿರ್ಧರಿಸಿದೆ ಎಂದು ತನ್ನ ನೋವಿನ ಕತೆಯನ್ನು ಬಿಚ್ಚಿಡುತ್ತಾನೆ ತಾಜ್ಞಿ.
ಅವನ ಪತ್ನಿ ಸಂಗೀತಾಗೆ ಆ ಊರಿನ ಮೇಲ್ವರ್ಗದ ಜಮೀನುದಾರನೊಬ್ಬ ತನ್ನ ಬಾವಿಯಿಂದ ನೀರು ಸೇದಲು ಬಿಡದ ನೋವು ತಾಜ್ನಿಯ ಈ ಸಾಧನೆಗೆ ಪ್ರೇರಣೆಯಾಯಿತು