ಮತ್ತೆ ಪಠಾಣ್‌ಕೋಟ್ ಉಗ್ರರು ನಮ್ಮವರಲ್ಲ ಎಂದು ಕೈಯೆತ್ತಿದ ಪಾಕಿಸ್ತಾನ
Update: 2016-05-08 10:33 IST
ಹೊಸದಿಲ್ಲಿ, ಮೇ 8: ಪಠಾಣ್‌ಕೋಟ್ ದಾಳಿಯಲ್ಲಿ ಪಾಕಿಸ್ತಾನಿ ಉಗ್ರರ ಕೈವಾಡವಿರುವ ಬಗ್ಗೆ ಭಾರತ ಹಲವು ದಾಖಲೆಗಳನ್ನು ನೀಡಿದ ಹೊರತಾಗಿಯೂ ದಾಳಿ ವೇಳೆ ಹತರಾದ ನಾಲ್ವರು ಉಗ್ರರ ಮೃತದೇಹಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿದೆ. ಹೀಗಾಗಿ ಭಾರತವೇ ಅವರ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.
ದಾಳಿಯಲ್ಲಿ ಭಾಗಿಯಾದ ನಾಲ್ವರು ಜೈಶೇ ಮುಹಮ್ಮದ್ ಸಂಘಟನೆಯ ಉಗ್ರರ ಸಂಭಾಷಣೆ ಕುರಿತ ದಾಖಲೆ ಸಹಿತ ಮಹತ್ವದ ಪುರಾವೆಗಳನ್ನು ಭಾರತವು ಇಸ್ಲಾಮಾಬಾದ್‌ಗೆ ಹಸ್ತಾಂತರಿಸಿದ್ದರೂ ಪಾಕ್ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.
ಆರಂಭದಲ್ಲಿ ಪುರಾವೆಗಳನ್ನು ಒಪ್ಪಿಕೊಳ್ಳುವಂತೆ ನಾಟಕ ಮಾಡಿದ್ದ ಪಾಕ್, ನೆಪಮಾತ್ರದ ತನಿಖೆ ನಡೆಸಿ ಪುರಾವೆಗಳನ್ನು ತಳ್ಳಿಹಾಕಿದೆ.
ಕೊನೆಗೆ ಭಾರತವೇ ಇಸ್ಲಾಮಿಕ್ ವಿಧಿ ವಿಧಾನಗಳ ಅನುಸಾರ ನಾಲ್ವರು ಉಗ್ರರ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದೆ.