ಕೇರಳದಲ್ಲಿ ಸಿಪಿಎಂ- ಕಾಂಗ್ರೆಸ್ ಮಧ್ಯೆ ಒಳಒಪ್ಪಂದದ ರಾಜಕೀಯ: ಮೋದಿ ಆರೋಪ
ಕಾಸರಗೋಡು, ಮೇ 8: ಕೇರಳದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಒಳಒಪ್ಪಂದದ ರಾಜಕೀಯ ನಡೆಯುತ್ತಿದೆ. ಅದರಂತೆ ಪ್ರತಿ ಐದು ವರ್ಷಕ್ಕೊಮ್ಮೆ ಈ ಎರಡು ಪಕ್ಷಗಳು ಅಧಿಕಾರಕ್ಕೇರುತ್ತಿವೆ. ಆದರೆ ಈ ಚುನಾವಣೆ ಹಿಂಸಾ ರಾಜಕೀಯದಿಂದ ಕೇರಳವನ್ನು ರಕ್ಷಿಸುವ, ಯುವಜನರ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಕೇರಳ ವಿಧಾಸನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಇಂದು ಕಾಸರಗೋಡಿಗೆ ಆಗಮಿಸಿದ ಅವರು ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೇರಳ ಹಿಂಸಾ ರಾಜಕೀಯದಲ್ಲಿ ನಲುಗಿ ಹೋಗಿದೆ. ಇದರಲ್ಲಿ ಹಲವು ರಾಜಕೀಯ ಮುಖಂಡರು ಹತ್ಯೆಯಾಗಿದ್ದಾರೆ. ಬಿಜೆಪಿಯ 150ಕ್ಕೂ ಅಧಿಕ ಕಾರ್ಯಕರ್ತರು ಹಿಂಸಾ ರಾಜಕೀಯಕ್ಕೆ ಬಲಿಯಾಗಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ಪ್ರಧಾನಿ ನುಡಿದರು.
ಅಡಿಕೆ ಕೃಷಿಕರ ಸಮಸ್ಯೆಗೆ ಕೇಂದ್ರ ಸರಕಾರ ಸರಕಾರತ್ಮಕವಾಗಿ ಸ್ಪಂದಿಸಿದೆ. ಅಡಿಕೆ, ತೆಂಗು ಕೃಷಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಿದೆ. ಭಾರತಕ್ಕೆ ಸ್ವಾತಂತ್ರ ಲಭಿಸಿದ 75ನೆ ವಾರ್ಷಿಕೋತ್ಸವ ಆಚರಿಸುತ್ತಿರುವ 2022ರ ವೇಳೆಗೆ ಕೃಷಿಕರ ಆದಾಯ ಇಮ್ಮಡಿಗೊಳಿಸಲು ಕೇಂದ್ರ ಸರಕಾರ ಯೋಜನೆ ಹಾಕಿದೆ ಎಂದವರು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಂಗಳೂರು ಸಂಸದ ನಳಿಗಿಕುಮಾರ್ ಕಟೀಲು, ವಿವಿಧ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಕೆ.ಸುರೇಂದ್ರನ್, ಕುಂಟಾರು ರವೀಶ್ ತಂತ್ರಿ, ಕೆ.ಶ್ರೀಕಾಂತ್, ಎಂ.ಭಾಸ್ಕರನ್, ಎಂ.ಪಿ.ರಾಘವನ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪ್ರಮೀಳಾ ಸಿ. ನಾಯಕ್, ಸಿ.ಕೆ.ಪದ್ಮನಾಭನ್ ಮೊದಲಾದವರು ಉಪಸ್ಥಿತರಿದ್ದರು.
ಮಲಯಾಳದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ
ಮಲಯಾಳದಲ್ಲಿ ಭಾಷಣ ಆರಂಭಿಸಿದ ಮೋದಿಯವರು ಮಲಯಾಳದಲ್ಲೇ ಕೊನೆಗೊಳಿಸುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು.
ಬೆಳಗ್ಗೆ 9:45ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರು, ಅಲ್ಲಿಂದ 10:25ರ ಸುಮಾರಿಗೆ ಹೆಲಿಕಾಪ್ಟರ್‌ನಲ್ಲಿ ಕಾಸರಗೋಡು ಸರಕಾರಿ ಕಾಲೇಜು ಹೆಲಿಪ್ಯಾಡ್‌ನಲ್ಲಿ ಬಂದಿಳಿದರು. ಅಲ್ಲಿಂದ 10:40ಕ್ಕೆ ವೇದಿಕೆಗೆ ಆಗಮಿಸಿದ ಅವರು 25 ನಿಮಿಷಗಳ ಕಾಲ ಭಾಷಣ ಮಾಡಿದರು. 11:20ಕ್ಕೆ ವೇದಿಕೆಯಿಂದ ನಿರ್ಗಮಿಸಿದರು.