×
Ad

ನಿಯಮ ಉಲ್ಲಂಘಿಸಿ ಕೊಳವೆಬಾವಿ ಕೊರೆತ ಪ್ರಕರಣ: ನನ್ನ ಪಾತ್ರವಿಲ್ಲವೆಂದ ಉಳ್ಳಾಲ ಪುರಸಭಾ ಆಯುಕ್ತೆ

Update: 2016-05-08 15:14 IST

ಮಂಗಳೂರು, ಮೇ 8: ನಗರದ ಪ್ರಭಾತ್ ಸಿನಿಮಾ ಮಂದಿರದ ಬಳಿರುವ ವಸತಿ ಸಮ್ಮುಚ್ಚಯವೊಂದರಲ್ಲಿ ನಿಯಮ ಉಲ್ಲಂಘಿಸಿ ಕೊಳವೆಬಾವಿ ಕೊರೆಸಿರುವ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಉಳ್ಳಾಲ ಪುರಸಭಾ ಆಯುಕ್ತೆ ರೂಪಾ ಶೆಟ್ಟಿ ವಾರ್ತಾಭಾರತಿಗೆ ಸ್ಪಷ್ಟಪಡಿಸಿದ್ದಾರೆ. ‘‘ನಾನು ಸೇರಿದಂತೆ ಹಲವರು ವಾಸ್ತವ್ಯವಿರುವ ಈ ವಸತಿ ಸಮುಚ್ಚಯದಲ್ಲಿ ಕಳೆದ ಎರಡು ತಿಂಗಳುಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಸಮುಚ್ಚಯದ ಸೊಸೈಟಿಯವರು ಕೊಳವೆಬಾವಿ ಕೊರೆಸಲು ತೀರ್ಮಾನಿಸಿದ್ದರು. ಅದರಂತೆ ಕಳೆದ ರಾತ್ರಿ ಬೋರ್‌ವೆಲ್ ಯಂತ್ರವನ್ನು ಕರೆಸಿದ್ದಾರೆ. ಆದರೆ ನಾನು ಉಳ್ಳಾಲದಲ್ಲಿ ನಡೆಯುತ್ತಿದ್ದ ಅಬ್ಬಕ್ಕ ಉತ್ಸವದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿಂದ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಕೊಳವೆಬಾವಿ ಕೊರೆಸುತ್ತಿರುವುದು ಗಮನಕ್ಕೆ ಬಂತು. ಕೂಡಲೇ ಈ ಬಗ್ಗೆ ಮನಪಾ ಆಯುಕ್ತರ ಜೊತೆ ನಾನು ದೂರವಾಣಿ ಮೂಲಕ ಮಾತನಾಡಿ ಸಲಹೆ ಕೇಳಿದ್ದೆ. ಈ ವೇಳೆ ಅವರು ಕೊಳವೆಬಾವಿ ಕೊರೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಬಗ್ಗೆ ತಿಳಿಸಿದರು. ಅದರಂತೆ ಬೊಲ್‌ವೆಲ್ ಕೊರೆಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ. ಬಳಿಕ ಬೋರ್‌ವೆಲ್ ಕೊರೆಸುವ ಕಾರ್ಯ ಕೂಡ ಸ್ಥಗಿತಗೊಳಿಸಲಾಯಿತು’’ ಎಂದರು.

 ‘‘ನಾನೇ ಬೋರ್‌ವೆಲ್ ಕೊರೆಸಿದ್ದೇನೆ ಎಂಬ ಅಪಪ್ರಚಾರ ನಡೆಯುತ್ತಿದೆ. ಆ ವಸತಿ ಸಮುಚ್ಚಯದಲ್ಲಿ 50ಕ್ಕೂ ಅಧಿಕ ಫ್ಲಾಟ್‌ಗಳಿದ್ದು, ನಾನು ಈ ಪೈಕಿ ಫ್ಲಾಟೊಂದರ ಮಾಲಕಿ ಮಾತ್ರ. ಬಿಲ್ಡಿಂಗ್‌ನ ಒಡತಿಯಲ್ಲ. ಅದೇರೀತಿ, ವಸತಿ ಸಮುಚ್ಚಯದ ಸೊಸೈಟಿಯಲ್ಲಿ ಕಾರ್ಯದರ್ಶಿ, ಅಧ್ಯಕ್ಷೆಯೋ ಆಗಿಲ್ಲ. ಬೋರ್‌ವೆಲ್ ಕೊರೆಸಿರುವುದಕ್ಕೂ ನನಗೂ ಸಂಬಂಧವಿಲ್ಲ.ವಸತಿ ಸಮುಚ್ಚಯದಲ್ಲಿ ನಾನು ಬೋರ್‌ವೆಲ್ ಕೊರೆಸಿದ್ದೇನೆ ಎಂಬುದು ಶುದ್ಧ ಸುಳ್ಳು’’ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News