×
Ad

ಮಂಗಳೂರು:ಕಲ್ಲು, ದೊಣ್ಣೆಗಳಿಂದ ಹೊಡೆದು ಯುವಕನ ಬರ್ಬರ ಕೊಲೆ - ಇನ್ನೋರ್ವನಿಗೆ ಗಾಯ

Update: 2016-05-08 18:56 IST

ಮಂಗಳೂರು, ಮೇ 8: ಆಟೋ ರಿಕ್ಷಾವೊಂದರಲ್ಲಿ ಆಗಮಿಸಿದ ತಂಡವೊಂದು ಯುವಕನೋರ್ವನಿಗೆ ಕಲ್ಲು, ದೊಣ್ಣೆಗಳಿಂದ ಹೊಡೆದು ಬರ್ಬರವಾಗಿ ಕೊಲೆ ಕೊಲೆ ಮಾಡಿರುವ ಘಟನೆ ಬಿಜೈ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಇಂದು ಸಂಜೆ ನಡೆದಿದೆ. ಘಟನೆಯಲ್ಲಿ ಇನ್ನೋರ್ವನ ಮೇಲೂ ತಂಡ ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಗೆಬಜಾರ್‌ನ ನಿವಾಸಿ ರೋಹಿತ್ (42) ಮೃತಪಟ್ಟ ವ್ಯಕ್ತಿ. ಗಾಯಗೊಂಡ ವ್ಯಕ್ತಿಯನ್ನು ನಂತೂರ್ ಈಡನ್‌ಗಾರ್ಡ್ ಬಳಿಯ ನಿವಾಸಿ ರೋಶನ್ (36) ಎಂದು ಗುರುತಿಸಲಾಗಿದೆ.

ಕದ್ರಿಯಲ್ಲಿ ಟೀ ಸ್ಟಾಲ್ ಅಂಗಡಿಯೊಂದನ್ನು ಹೊಂದಿರುವ ರೋಶನ್ ಇಂದು ಸಂಜೆ ತನ್ನ ಸ್ನೇಹಿತ ರೋಹಿತ್‌ನೊಂದಿಗೆ ಬಿಜೈಯಿಂದ ಎ.ಜೆ. ಆಸ್ಪತ್ರೆಯ ಕಡೆಗೆ ತೆರಳುತ್ತಿದ್ದರು. ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಆಟೋ ರಿಕ್ಷಾವೊಂದರಲ್ಲಿ ಆಗಮಿಸಿದ ಮೂವರ ತಂಡ ಇವರ ಮೇಲೆ ಕಲ್ಲು, ದೋಣ್ಣೆ ಹಾಗೂ ಚೂರಿಯಿಂದ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರೋಹಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ರೋಶನ್‌ನ ಬೆನ್ನು ಹಾಗೂ ಬಲಗೈ ಬೆರಳುಗಳಿಗೆ ಇರಿತದ ಗಾಯಗಳಾಗಿದ್ದು, ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ರೋಹಿತ್ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲವು ತಿಂಗಳ ಹಿಂದೆ ಕೆಲಸಕ್ಕಿದ್ದ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಸಾಲ ವಸೂಲಿಗೆ ತೆರಳುತ್ತಿದ್ದ ಎನ್ನಲಾಗಿದೆ. ಕೆಲವು ವಾಹನ ಸಾಲಗಾರರು ಸಾಲ ಮರುಪಾವತಿ ಮಾಡದಿದ್ದಾಗ ಅವರ ವಾಹನಗಳನ್ನು ಮುಟ್ಟುಗೋಲು ಹಾಕುತ್ತಿದ್ದರೆಂದು ಹೇಳಲಾಗಿದ್ದು, ಇದೇ ವೈಷಮ್ಯದ ಹಿನ್ನೆಲೆಯಲ್ಲಿ ತಂಡ ರೋಹಿತ್‌ನನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಈ ಬರ್ಕೆ ಪೊಲೀಸರು ಠಾಣಾ ಇನ್ಸ್‌ಪೆಕ್ಟರ್ ಎ.ಕೆ.ರಾಜೇಶ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News