ಸುಡುಬಿಸಿಲ ಬೇಸಿಗೆ ಕಾರಣ : ಸಮಸ್ತ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಬದಲಾವಣೆ
ಮಂಗಳೂರು, ಮೇ 8: ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದ 5, 7, 10 ಮತ್ತು 12ನೆ ಮದ್ರಸ ತರಗತಿಗಳ ಪ್ರಸಕ್ತ ಸಾಲಿನ ಪಬ್ಲಿಕ್ ಪರೀಕ್ಷೆಯು ಮೇ 11 ಮತ್ತು 12ರಂದು ನಡೆಯಲಿದೆ. ಆದರೆ ಸುಡು ಬಿಸಿಲ ಬೇಸಿಗೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲತೆಗಾಗಿ ವೇಳಾಪಟ್ಟಿಯ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಬದಲಾವಣೆಯನ್ವಯ ಮೇ 11ರಂದು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಮೊದಲ ಹಂತದ ಹಾಗೂ ಅಪರಾಹ್ನ 3ರಿಂದ 5ರವರೆಗೆ ದ್ವಿತೀಯ ಹಂತದ ಪರೀಕ್ಷೆಗಳು ನಡೆಯಲಿವೆ. ಅದೇರೀತಿ, ಮೇ 12ರಂದು ಬೆಳಗ್ಗೆ 7ರಿಂದ 9ರವರೆಗೆ ಮೊದಲ ಹಂತ ಹಾಗೂ ಬೆಳಗ್ಗೆ 10ರಿಂದ 12ರವರೆಗೆ ದ್ವಿತೀಯ ಹಂತದ ಪರೀಕ್ಷೆಗಳು ನಡೆಯಲಿವೆ ಎಂದು ಸಮಸ್ತ ಪರೀಕ್ಷಾ ಬೋರ್ಡ್ ಅಧ್ಯಕ್ಷ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ಎಸ್ಕೆಐಎಂವಿ ಬೋರ್ಡ್ ಸದಸ್ಯರಾದ ಹಾಜಿ ಜಿ. ಅಬೂಬಕರ್ ಗೋಳ್ತಮಜಲು, ಹಾಜಿ ಕೆ.ಎಸ್.ಇಸ್ಮಾಯೀಲ್ ಕಲ್ಲಡ್ಕ ಹಾಗೂ ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.