×
Ad

ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಾರ್ಪೊರೇಟರ್ ಸಾಥ್: ಆರೋಪ

Update: 2016-05-08 21:03 IST
ಮನೆಯೊಂದಕ್ಕೆ ತಾಗಿಕೊಂಡೇ ಕಾನೂನುಬಾಹಿರವಾಗಿ ನಿರ್ಮಾಣವಾಗಿರುವ ಕಟ್ಟಡ.

ಮಂಗಳೂರು, ಮೇ 8: ನಗರದ ಬೆಂದೂರ್‌ವೆಲ್‌ನಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಕಾನೂನು ಬಾಹಿರವಾಗಿ ಪಾಲಿಕೆಯ ಕಾರ್ಪೊರೇಟರ್‌ವೊಬ್ಬರು ಸಾಥ್ ನೀಡುತ್ತಿದ್ದು, ಪ್ರಸ್ತುತ ಕಟ್ಟಡವನ್ನು ಕೆಡವಲು ಪಾಲಿಕೆ ನೋಟಿಸ್ ಜಾರಿಗೊಳಿಸಿದ್ದರೂ ಕಾರ್ಪೊರೇಟರ್ ನವೀನ್ ಡಿಸೋಜರ ಕುಮ್ಮಕ್ಕಿನಿಂದಾಗಿ ಪಾಲಿಕೆಯ ನೋಟಿಸ್‌ಗೆ ಬೆಲೆ ಇಲ್ಲದಾಗಿದೆ ಎಂದು ಆರೋಪಿಸಲಾಗಿದೆ.

 ಅಕ್ರಮ ಮನೆ ಕಟ್ಟಡದ ವಿರುದ್ಧ ಕಂಕನಾಡಿಯ ಬೆಂದೂರ್‌ವೆಲ್‌ನ 3ನೆ ಕ್ರಾಸ್‌ನ ನಿವಾಸಿ ಅಶ್ರಫ್ ಅಲಿ ಎಂಬವರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದಾರೆ. ಹಲವು ವರ್ಷಗಳ ಹಿಂದೆ ಅಶ್ರಫ್ ಬೆಂದೂರ್‌ವೆಲ್‌ನ 3ನೆ ಕ್ರಾಸ್‌ನಲ್ಲಿ ಮನೆಯೊಂದನ್ನು ಕಟ್ಟಿ ಜೀವನ ನಡೆಸುತ್ತಿದ್ದು, ಇವರ ಕಟ್ಟಡಕ್ಕೆ ತಾಗಿಕೊಂಡೇ ಇನ್ನೊಬ್ಬರು ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಮನೆಯನ್ನು ಕಟ್ಟುವಾಗ ಮನೆಯ ಸುತ್ತ ಕೆಲವು ಅಡಿಗಳನ್ನು ಬಿಟ್ಟು ಮನೆ ನಿರ್ಮಿಸಬೇಕೆಂಬ ನಿಯಮವಿದ್ದರೂ ಉಲ್ಲಂಘಿಸಲಾಗಿದೆ. ಅಲ್ಲದೆ, ಕಟ್ಟಡವು ಹತ್ತಿರದಲ್ಲೇ ಇರುವ ಅಶ್ರಫ್ ಅವರ ಮನೆಯ ಮೇಲ್ಭಾಗವನ್ನು ಮೀರಿ ಬಂದಿದೆ. ಈ ಬಗ್ಗೆ ಅಶ್ರಫ್ ಪ್ರಸ್ತುತ ಅಕ್ರಮ ಮನೆ ನಿರ್ಮಾಣದ ವಿರುದ್ಧ ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಪಾಲಿಕೆಯ ಎಂಜಿನಿಯರ್ ಹಾಗೂ ಯೋಜನಾ ಅಧಿಕಾರಿಯು ಸ್ಥಳ ಪರೀಲನೆ ನಡೆಸಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡವು ಅಕ್ರಮ ಎಂದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಟ್ಟಡ ತೆರವುಗೊಳಿಸುವಂತೆ ಹೇಮಾವತಿ ಎಂಬವರಿಗೆ ಆದೇಶ ನೀಡಿದ್ದಾರೆ.
‘‘1976ರ ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಪ್ರಕರಣ 321(1) ಮತ್ತು (2)ರಂತೆ ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡವು ಕಾನೂನುಬಾಹಿರವಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸಿ ನೆಲಸಮ ಮಾಡತಕ್ಕದ್ದು ಮತ್ತು ಈ ಅನಧಿಕೃತ ನಿರ್ಮಾಣದ ಬಗ್ಗೆ ಸಮರ್ಪಕವಾದ ವಿವರಣೆಯನ್ನು ಈ ನೋಟಿಸ್ ತಲುಪಿದ 24 ಗಂಟೆಯೊಳಗೆ ಸಲ್ಲಿಸತಕ್ಕದ್ದು. ನಿಗದಿತ ಸಮಯದೊಳಗೆ ಈ ಅನಧಿಕೃತ ಕಟ್ಟಡವನ್ನು ಕೆಡವಲು ಮತ್ತು ವಿವರಣೆ ನೀಡಲು ತಪ್ಪಿದಲ್ಲಿ ಕಾನೂನು ಉಲ್ಲಂಘನೆ ಮಾಡಿರುವುದನ್ನು ಒಪ್ಪಿರುವಿರಿ ಎಂದು ಪರಿಗಣಿಸಿ ಮೇಲ್ಕಾಣಿಸಿದ ಅಧಿನಿಯಮದ ಪ್ರಕರಣ 321 (3)ರಂತೆ ಈ ತಾತ್ಕಾಲಿಕ ಆದೇಶವನ್ನು ಸ್ವೀಕರಿಸಲಾಗುವುದು. ಮತ್ತು ಪ್ರಕರಣ 462ರಂತೆ ಈ ಅನಧಿಕೃತ ಕಟ್ಟಡವನ್ನು ನಗರಪಾಲಿಕಾ ವತಿಯಿಂದ ತಪ್ಪಿತಸ್ಥರ ಹೊಣೆ, ಜವಾಬ್ದಾರಿ ಮತ್ತು ವೆಚ್ಚದಲ್ಲಿ ನೆಲಸಮ ಮಾಡಲು ಆದೇಶಿಸಲಾಗುವುದು’’ ಎಂದು ಇದೇ ತಿಂಗಳ ಮೇ 3ರಂದು ಮಹಾನಗರ ಪಾಲಿಕೆಯ ಅಧಿಕಾರಿಯು ಹೇಮಾವತಿಯವರಿಗೆ ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
  ಪಾಲಿಕೆ ನೀಡಿರುವ ನೋಟಿಸ್‌ನಲ್ಲಿ 24 ಗಂಟೆಗಳ ಅವಧಿ ಮೀರಿ ಹೋಗಿ ಇದೀಗ 5 ದಿನಗಳು ಕಳೆದರೂ ಪಾಲಿಕೆಯಿಂದ ಯಾವುದೇ ಕ್ರಮ ಜರಗಿಸಿಲ್ಲ. ಕಾರ್ಪೊರೇಟರ್ ನವೀನ್ ಡಿಸೋಜರವರ ಒತ್ತಡದಿಂದಾಗಿ ಪಾಲಿಕೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲು ಮುಂದಾಗುತ್ತಿಲ್ಲ ಎಂದು ಅಶ್ರಫ್ ಆರೋಪಿಸಿದ್ದಾರೆ.
ಈ ಹಿಂದೆ ನಾನು ಮನೆಯನ್ನು ನಿರ್ಮಿಸುವಾದ ಇದೇ ಪಾಲಿಕೆಯ ಅಧಿಕಾರಿಗಳು ಮನೆ ಜಾಗದ ವೀಕ್ಷಣೆ ನಡೆಸುವಾಗ ಮನೆಯ ಸುತ್ತ 3 ಅಡಿಗಳನ್ನು ಜಾಗ ಬಿಡುವಂತೆ ನನಗೆ ಸೂಚನೆ ನೀಡಿದ್ದರು. ಆದರೆ, ಇದೀಗ ನನ್ನ ಮನೆಯ ಹತ್ತಿರದಲ್ಲೇ ಒಂದು ಅಡಿಯನ್ನೂ ಬಿಡದೆ ಅಕ್ರಮವಾಗಿ ಮನೆ ನಿರ್ಮಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲವೇ ಎಂದು ಅಶ್ರಫ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News