ತನ್ನ ವಿರುದ್ಧ ಟ್ರಂಪ್ ಶೈಲಿಯ ದಾಳಿಗೆ ಲಂಡನ್ ಮೇಯರ್ ಖಂಡನೆ
Update: 2016-05-08 21:32 IST
ಲಂಡನ್,ಮೇ 8: ತನ್ನ ಆಯ್ಕೆಯನ್ನು ತಡೆಯಲು ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಸಮುದಾಯಗಳಲ್ಲಿ ಒಡಕು ಹುಟ್ಟಿಸಲು ‘ಡೊನಾಲ್ಡ್ ಟ್ರಂಪ್ ಮಾದರಿ’ತಂತ್ರಗಳನ್ನು ಬಳಸಿದ್ದರು ಎಂದು ಲಂಡನ್ನಿನ ನೂತನ ಮೇಯರ್ ಸಾದಿಕ್ ಖಾನ್ ಅವರು ರವಿವಾರ ಇಲ್ಲಿ ಆರೋಪಿಸಿದರು. ತಾನು ‘ಎಲ್ಲ ಲಂಡನ್ನಿಗರ ಮೇಯರ್’ ಆಗುವ ಭರವಸೆಯೊಂದಿಗೆ ಲೇಬರ್ ಪಕ್ಷದ ಖಾನ್ ಶನಿವಾರವಷ್ಟೇ ಮೊದಲ ಮುಸ್ಲಿಮ್ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತನ್ನನ್ನು ಇಸ್ಲಾಮಿಕ್ ಉಗ್ರವಾದಿಗಳೊಂದಿಗೆ ತಳುಕು ಹಾಕಲು ಯತ್ನಿಸಿದ್ದಕ್ಕಾಗಿ ಕ್ಯಾಮರೂನ್ ಅವರ ಕನ್ಸರ್ವೇಟಿವ್ ಪಕ್ಷವನ್ನು ಖಾನ್ ಬಲವಾಗಿ ಖಂಡಿಸಿದರು.
ವಿವಿಧ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳ ನಡುವೆ ಪರಸ್ಪರ ದ್ವೇಷವನ್ನು ಮೂಡಿಸುವ ಯತ್ನವಾಗಿ ಅವರು ಬೆದರಿಕೆ,ಕೊಂಕುನುಡಿಗಳನ್ನು ಬಳಸಿದ್ದರು ಮತ್ತು ಇದು ಡೊನಾಲ್ಡ್ ಟ್ರಂಪ್ ಅವರ ಶುದ್ಧ ಅನುಕರಣೆಯಾಗಿತ್ತು ಎಂದು ಖಾನ್ ‘ದಿ ಅಬ್ಸರ್ವರ್’ ಪತ್ರಿಕೆಯಲ್ಲಿನ ಲೇಖನದಲ್ಲಿ ಬರೆದಿದ್ದಾರೆ.