ಉಡುಪಿ: ವಾರಾಹಿ ತಡೆಗೋಡೆ ಕಾಮಗಾರಿಯ ನೀರಿನ ತಡೆ ಧ್ವಂಸ
ಉಡುಪಿ, ಮೇ 8: ಮೊಳಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಬಾಸಬೈಲು ಮಠ ಎಂಬಲ್ಲಿ ವಾರಾಹಿ ಕಾಲುವೆಯ 23ನೆ ಕಿ.ಮೀ. ಪ್ರದೇಶದ ಎಡ ಬದಿ ತಡೆಗೋಡೆಯ ದುರಸ್ತಿ ಕಾಮಗಾರಿಗಾಗಿ ಹಾಕಲಾಗಿದ್ದ ನೀರಿನ ತಡೆಯ ಬಂಡುಗಳನ್ನು ಮೇ7ರಂದು ರಾತ್ರಿ ವೇಳೆ ದುಷ್ಕರ್ಮಿಗಳು ಧ್ವಂಸ ಮಾಡುವ ಮೂಲಕ ಕಾಮಗಾರಿಗೆ ತಡೆಯೊಡ್ಡಿದ್ದು, ಇದರ ಪರಿಣಾಮ ಕಾಮಗಾರಿಯ ಸಲಕರಣೆಗಳು ನೀರಿನಲ್ಲಿ ಕೊಚ್ಚಿಹೋಗಿ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾ ಗಿದೆ.
ಕಳೆದ ಜುಲೈ ತಿಂಗಳಲ್ಲಿ ಕಾಲುವೆಗೆ ಈ ಪ್ರದೇಶದಲ್ಲಿ ರಿವಿಟ್‌ಮೆಂಟ್ ನಿರ್ಮಿಸದ ಕಾರಣ ಮೇಲಿನಿಂದ ಶೇಡಿಮಣ್ಣು ಕುಸಿದು ಕಾಲುವೆ ಒಡೆ ಯಿತು. ಇದರ ಪರಿಣಾಮ ಶೇಡಿಮಣ್ಣು ನೀರಿನ ಜೊತೆ ಸಮೀಪದ ಸುಮಾರು 9 ಎಕರೆಗೂ ಅಧಿಕ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗೆ ನುಗ್ಗಿ ಅಪಾರ ನಷ್ಟ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ಕಳೆದ ಬಾರಿ ಕುಸಿದ ಸುಮಾರು 40ಮೀಟರ್ ಎಡ ಬದಿ ತಡೆಗೋಡೆಯನ್ನು ದುರಸ್ತಿ ಹಾಗೂ ಮಣ್ಣು ತೆಗೆಯುವ ಕಾರ್ಯಕ್ಕೆ ಒಂದು ವಾರದ ಹಿಂದೆ ಚಾಲನೆ ನೀಡಲಾಗಿತ್ತು. ಅದಕ್ಕಾಗಿ ಕಾಲುವೆಯ ಮೂರು ಕಡೆ ಹರಿಯುವ ನೀರನ್ನು ತಡೆಯಲು ಮರಳು ಮಿಶ್ರಿತ ಚೀಲಗಳನ್ನು ಇರಿಸಲಾಗಿತ್ತು. ಒಂದು ಕಡೆ ಮಣ್ಣಿನ ತಡೆ ಹಾಕಿ ಕಾಲುವೆಯನ್ನು ಮುಚ್ಚಲಾಗಿತ್ತು. ಇವುಗಳ ಮಧ್ಯೆ ತಡೆಗೋಡೆ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ ನಡೆಯುತ್ತಿತ್ತು.
ಬಹುತೇಕ ಕಾಮಗಾರಿ ಮುಗಿದಿದ್ದು, ನಾಳೆಯಿಂದ ಕಾಲುವೆಯಲ್ಲಿ ನೀರು ಹರಿಸಲು ಅಧಿಕಾರಿಗಳು ಯೋಜನೆ ಹಾಕಿದ್ದರು. ಆದರೆ ನಿನ್ನೆ ತಡರಾತ್ರಿ ವೇಳೆ ದುಷ್ಕರ್ಮಿಗಳು ದುರುದ್ದೇಶದಿಂದ ಈ ತಡೆಗೋಡೆಗಳನ್ನು ಒಡೆದು ನೀರನ್ನು ಹರಿಯುವಂತೆ ಮಾಡಿದ್ದಾರೆನ್ನಲಾಗಿದೆ. ಕಾಮಗಾರಿಯನ್ನು ತಡೆ ಯುವ ದುರುದ್ದೇಶ ಈ ಕೃತ್ಯದ ಹಿಂದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ಪರಿಣಾಮ ಕಾಮಗಾರಿಯ ಸಲಕರಣೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕಾಮಗಾರಿಗೆ ಬಳಸಲಾಗುವ ರಾಡುಗಳು, ಫ್ಲೈವುಡ್‌ನ 20 ಶೀಟ್‌ಗಳು, 2 ವೈಬ್ರೇಟರ್, ಮರದ ರನ್ನರ್‌ಗಳು, ಹಲಗೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅಲ್ಲದೇ ಹಿಟಾಚಿ ಹಾಗೂ ಇಂಜಿನ್ ಒಳಗೂ ನೀರು ಹೊಕ್ಕಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಹೀಗಾಗಿ ನಾಳೆಗೆ ಮುಗಿಯಬೇಕಾದ ಕಾಮಗಾರಿಯು ಇದೀಗ ಅರ್ಧ ದಲ್ಲೇ ಸ್ಥಗಿತಗೊಳ್ಳುವಂತಾಗಿದೆ. ಇದರಿಂದ ಸ್ಥಳೀಯ ರೈತರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ‘ಕೆಲಸ ಮಾಡುವ ಗುತ್ತಿಗೆದಾರರಿಗೆ ಈ ರೀತಿ ಸಮಸ್ಯೆ ಉಂಟು ಮಾಡಿದರೆ ಕಾಮಗಾರಿ ನಡೆಯುವುದಾದರೂ ಹೇಗೆ? ಕೆಲಸ ನಡೆಯದೇ ಇದ್ದಲ್ಲಿ ಈ ಬಾರಿಯೂ ಕಳೆದ ವರ್ಷದ ಸ್ಥಿತಿ ಮರುಕಳಿಸುತ್ತದೆ. ಹಾಗದರೇ ಇಲ್ಲಿ ನಾವು ಬದುಕುವುದು ಬೇಡವೇ? ನಮಗೆ ಸಾಯುವುದೇ ಉಳಿದಿರುವ ಮಾರ್ಗ’ ಎಂದು ಬಾಸಬೈಲು ಕೃಷಿಕ ವಿರೂಪಾಕ್ಷ ಕಣ್ಣೀರಿಟ್ಟರು.
ಸ್ಥಳಕ್ಕೆ ಭೇಟಿ ನೀಡಿರುವ ವಾರಾಹಿ ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ಜಗದೀಶ್ ಪರಿಶೀಲನೆ ನಡೆಸಿದರು. ಕಳೆದ ವರ್ಷ ಸಂಭವಿಸಿದ ದುರಂತ ಈ ವರ್ಷವೂ ಮರುಕಳಿಸ ಬಾರದೆಂಬ ಉದ್ದೇಶದಿಂದ ಮಳೆ ಗಾಲಕ್ಕೆ ಮೊದಲೇ ತಡೆಗೋಡೆಯ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನೀರಿನ ಹರಿವಿಗೆ ಅಡ್ಡಲಾಗಿ ಹಾಕಿದ್ದ ತಡೆಯನ್ನು ದುಷ್ಕರ್ಮಿಗಳು ರಾತ್ರಿ ಕಿತುತಿಹಾಕಿರುವುದು ಕಂಡುಬಂದಿದೆ. ಮುಂದೆ ಪರಿಶೀಲಿಸಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಗುತ್ತಿಗೆದಾರರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.