ಬೆಳ್ತಂಗಡಿ: ಎಸ್.ಡಿ.ಎಮ್. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ
ಬೆಳ್ತಂಗಡಿ: ಗ್ರಾಮೀಣ ಪ್ರದೇಶವಾದ ಉಜಿರೆಯಲ್ಲಿ ಕಾಲೇಜನ್ನು ಪ್ರಾರಂಭಿಸಿರುವುದರಿಂದ ಕ್ರಾಂತಿಕಾರಿ ಪರಿವರ್ತನೆಯಾಗಿದೆ. ಆರ್ಥಿಕ ಪ್ರಗತಿಯಾಗಿದೆ. ಗುಣ ಮಟ್ಟದ ಶಿಕ್ಷಣದಿಂದ ಸಮಾನತೆ ಹಾಗೂ ಕ್ರಾಂತಿಕಾರಿ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಅವಕಾಶ ವಂಚಿತರಿಗೆ ತಮ್ಮ ಊರಿನಲ್ಲಿಯೇ ಉನ್ನತ ಶಿಕ್ಷಣದ ಸದವಕಾಶ ದೊರೆತು ಬಡತನ, ಅಸಮಾನತೆ ಮತ್ತು ನಿರುದ್ಯೋಗ ಮಸ್ಯೆ ನಿವಾರಣೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಭಾನುವಾರ ಉಜಿರೆಯಲ್ಲಿ ಎಸ್.ಡಿ.ಎಮ್. ಕಾಲೇಜಿನಲ್ಲಿ ಭಾನುವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಮಿಶ್ರಿತ ಭಯ ಇರಬೇಕು. ಗುರು - ಶಿಷ್ಯರ ನಡುವೆ ಆತ್ಮೀಯ ಸಂಬಂಧ ಇದ್ದಾಗ ಕಲಿಕೆ ಸಂತಸದಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಇದೇ 18 ರಂದು ಬುಧವಾರ ಬೆಂಗಳೂರಿನಲ್ಲಿ ಧರ್ಮಸ್ಥಳದ ವತಿಯಿಂದ ಹೊ ಆಯುರ್ವೇದ ಕಾಲೇಜು ಮತ್ತು 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ ಎಂದು ಅವರು ಪ್ರಕಟಿಸಿದರು.
ಮುಖ್ಯ ಅತಿಧಿಗಳಾಗಿ ಆಗಮಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಮಾತನಾಡಿ ಉಜಿರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಅರ್ದ ಶತಮಾನದ ಹಿಂದೆ ಕಾಲೇಜನ್ನು ಸ್ಥಾಪಿಸುವ ಮೂಲಕ ಇಡೀ ತಾಲೂಕಿನ ಅಭಿವೃದ್ದಿಗೆ ಚಾಲನೆ ನೀಡಿದರು. ಈ ಕಾಲೇಜು ತಾಲೂಕಿನ ಸಹಸ್ರಾರು ಜನರಿಗೆ ಶಿಕ್ಷಣ ಒದಗಿಸಿ ಹೊಸ ಬದುಕನ್ನು ನಡೆಸಲು ಕಾರಣವಾಗಿದೆ ಎಂದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಪರವಾಗಿ ಕೆ. ಪ್ರತಾಪಸಿಂಹ ನಾಯಕ್ ಮತ್ತು ಡಾ. ಪ್ರದೀಪ್ ನಾವರ ತಮ್ಮ ಕಾಲೇಜು ಜೀವನದ ಸವಿನೆನಪುಗಳನ್ನು ಕೃತಜ್ಞತೆಯಿಂದ ಸ್ಮರಿಸಿ ಅವಲೋಕನ ಮಾಡಿದರು. ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ.ಎಸ್. ಪ್ರಭಾಕರ್ ಮತ್ತು ಡಾ. ಬಿ. ಯಶೋವರ್ಮ ಅವರನ್ನು ಗೌರವಿಸಲಾಯಿತು. ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು, ಸಂಸ್ಕೃತಿ ಮತ್ತು ಸಾಧನೆಯ ರಾಯಬಾರಿಗಳಾಗಿದ್ದು ಮಾತೃ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲ ಪ್ರೋ ಎಸ್ ಪ್ರಭಾಕರ್ ಮಾತನಾಡಿ ಕಾಲೇಜಿನ್ನು ಆರಂಭದ ದಿನಗಳಲ್ಲಿ ಕಾಲೇಜು ನಡೆದು ಬಂದ ಹಾದಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಹೆಗ್ಗೆದಂಪತಿಯನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿ ಅಭಿನಂದನೆ ಸಲ್ಲಿಸಿದರು.
ಚಿತ್ರ ಕಲಾವಿದ ವಿಲಾಸ್ ನಾಯಕ್ ಸ್ಥಳದಲ್ಲೇ ಕಾಲೇಜಿನ ಕಲಾಕೃತಿ ರೂಪಿಸಿ ಹೆಗ್ಗಡೆಯವರಿಗೆ ಅರ್ಪಿಸಿದರು.
ಪೀತಾಂಬರ ಹೇರಾಜೆ ಸ್ವಾಗತಿಸಿದರು. ಬಿ.ಕೆ. ಧನಂಜಯ ರಾವ್ ಧನ್ಯವಾದವಿತ್ತರು. ಮಂಗಳೂರು ವಿ.ವಿ.ಯ ಡಾ. ಮಾಧವ ಕಾರ್ಯಕ್ರಮ ನಿರ್ವಹಿಸಿದರು.
ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಮುಕ್ತವಾಗಿ ಭೇಟಿಯಾಗಿ ಸಮಾಲೋಚನೆ, ವಿಚಾರ ವಿನಿಮಯ ನಡೆಸಿದರು. ಕಾಲೇಜಿನ ವಿವಿಧ ವಿಭಾಗಳಿಗೆ ಭೇಟಿ ನೀಡಿದರು.