ನೇತ್ರಾವತಿ ನದಿ ತಟದ ಅನಧಿಕೃತ ಪಂಪ್ ತೆರವು: ಇಳಂತಿಲ ಗ್ರಾಪಂ
ಉಪ್ಪಿನಂಗಡಿ, ಮೇ 8: ಇಳಂತಿಲ ಗ್ರಾಪಂ ವ್ಯಾಪ್ತಿಯ ನೇತ್ರಾವತಿ ನದಿ ತಟದಲ್ಲಿ ಪಂಚಾಯತ್‌ನ ಆಡಳಿತ ತಂಡ ಪರಿಶೀಲನೆ ನಡೆಸಿ ನದಿ ತಟದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಪಂಪ್‌ಗಳನ್ನು ತೆರವುಗೊಳಿಸಿದೆ.
ಇಳಂತಿಲ ಗ್ರಾಪಂ ವ್ಯಾಪ್ತಿಯ ನದಿ ತಟದ 40 ಮಂದಿ ಕೃಷಿಕರು ಪರವಾನಿಗೆ ಪಡೆದು ನದಿಗೆ ಪಂಪ್ ಅಳವಡಿಸಿದ್ದರು. ಈ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದ ಗ್ರಾಪಂ ಅಧ್ಯಕ್ಷ ಯು.ಕೆ. ಇಸುಬು ನೇತೃತ್ವದಲ್ಲಿ ಪಂಚಾಯತ್ ಅಧಿಕಾರಿಗಳ ತಂಡ ನದಿ ತಟದಲ್ಲಿ ಪರಿಶೀಲನೆ ನಡೆಸಿತ್ತು. ಈ ಸಂದರ್ಭ ಪರವಾನಿಗೆದಾರರಿಗಿಂತಲೂ ಅಧಿಕ ಮಂದಿ ಅನಧಿಕೃತವಾಗಿ ನದಿಯಿಂದ ಕೃಷಿ ತೋಟಗಳಿಗೆ ನೀರು ಹಾಯಿಸುತ್ತಿರುವುದು ಹಾಗೂ ಬೃಹತ್ ಕಟ್ಟಡಗಳ ವ್ಯಕ್ತಿಗಳು ನೇತ್ರಾವತಿ ನದಿಯಿಂದ ನೀರಿನ ಸಂಪರ್ಕ ಪಡೆದಿರುವುದು ಕಂಡು ಬಂತು. ಅಧ್ಯಕ್ಷರ ನಿರ್ದೇಶನದಂತೆ ತಕ್ಷಣ ಅನಧಿಕೃತ ಪಂಪ್‌ಗಳನ್ನು ತೆರವುಗೊಳಿಸಲಾಯಿತ್ತಲ್ಲದೆ, ಮಳೆ ಬಂದು ನದಿಯಲ್ಲಿ ನೀರು ಹರಿಯುವ ತನಕ ಪಂಪ್ ಅಳವಡಿಸದಂತೆ ಎಚ್ಚರಿಕೆ ನೀಡಿದರು. ಕಡವಿನಬಾಗಿಲು, ಕಡವಿನ ಗುಡ್ಡೆ, ಪೆದಮಲೆ, ರಿಪಾಯಿನಗರ, ಅಂಬೊಟ್ಟು, ನೇಜಿಗಾರು ಹಾಗೂ ಪೆರ್ಲಾಪು ಮುಂತಾದ ಕಡೆ ಕುಡಿಯುವ ನೀರಿಗೆ ಆಧಾರವಾಗಿದ್ದ ಕಡವಿನಬಾಗಿಲ ಸಮೀಪ ನೇತ್ರಾವತಿ ನದಿಯಲ್ಲಿ ತೋಡಿರುವ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿಂದ ಸುಮಾರು 500 ಮೀಟರ್ ದೂರದಲ್ಲಿರುವ ಮಹಾಕಾಳಿ ಗಯದಿಂದ ಬಾವಿಯ ಬುಡಕ್ಕೆ ನೀರು ಹಾಯಿಸಿ, ಬಾವಿಯ ಒರತೆ ಹೆಚ್ಚಿಸಲು ಪಂಚಾಯತ್ ಯೋಜನೆ ರೂಪಿಸಿದೆ.
ನೇತ್ರಾವತಿಯಲ್ಲಿ ನೀರಿನ ಹರಿವು ನಿಂತಿದ್ದು, ಅಲ್ಲಲ್ಲಿ ನಿಂತ ನೀರಿನಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಪಂಚಾಯತ್ ಆದೇಶ ನೀಡಿದೆ. ಅಲ್ಲದೆ, ಮಹಾಕಾಳಿ ಗಯದಿಂದ ಕಡವಿನಬಾಗಿಲಿನಲ್ಲಿರುವ ಇಳಂತಿಲ ಪಂಚಾಯತ್‌ನ ಬಾವಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ನೀರು ಹರಿಸಲು ಅನುಗ್ರಹ ಫಾರಂನ ಮಹಾಲಿಂಗ ಭಟ್ ಒಪ್ಪಿಕೊಂಡಿದ್ದು, ಜೋಗಿಬೆಟ್ಟು ಬನ್ನೆಂಗಳದ ಅಬೂಬಕರ್ ಎಂಬವರು ತನ್ನ ತೋಟದ ಕೊಳವೆ ಬಾವಿಯೊಂದನ್ನು ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳಲು ಪಂಚಾಯತ್ ಸುಪರ್ದಿಗೆ ನೀಡಿದ್ದಾರೆ. ಈ ಮೂಲಕ ಇಬ್ಬರು ಊರಿಗೆ ಕುಡಿಯುವ ನೀರು ಒದಗಿಸಲು ನೆರವಾಗಿದ್ದಾರೆ. ನದಿ ತಟದಲ್ಲಿ ಪರಿಶೀಲನೆ ಸಂದರ್ಭ ಗ್ರಾಪಂ ಸದಸ್ಯ ಯು.ಟಿ. ಫಯಾಝ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀಲಾ ಎಸ್. ಮತ್ತಿತರರು ಇದ್ದರು.