ಸೌದಿ ಮಾಲಕನ ಹಿಂಸೆಯಿಂದ ಸಾವನ್ನಪ್ಪಿದ ತೆಲಂಗಾಣ ಯುವತಿ
ದುಬೈ, ಮೇ 9: ಸೌದಿ ಅರೇಬಿಯಾದಲ್ಲಿ ಮನೆಗೆಲಸದಾಕೆಯಾಗಿದ್ದ ಹೈದರಾಬಾದ್ ಮೂಲದ ಯುವತಿಯೊಬ್ಬಳು ತನ್ನ ಮಾಲಕ ನೀಡಿದ ಹಿಂಸೆಯಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ತಿಳಿಸಿವೆ.
ಮೃತ ಯುವತಿಯನ್ನು ಅಸೀಮಾ ಖತೂನ್ ಎಂದು ಗುರುತಿಸಲಾಗಿದೆ. ಆಕೆಯ ವೀಸಾ ಅವಧಿ ಮುಕ್ತಾಯವಾಗಿದ್ದರೂ ಆಕೆಯನ್ನು ಮಾಲಕ ಅಲ್ಲಿಯೇ ಉಳಿಸಿಕೊಂಡಿದ್ದನೆಂದು ತಿಳಿದು ಬಂದಿದೆ.
ಆಕೆಗೆ ಅಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತೆಂದು ತಮಗೆ ಆಕೆ ದೂರಿದ್ದಳು ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ. ಕೆಲವು ವಾರಗಳ ಹಿಂದೆ ಮನೆಗೆ ಕರೆ ಮಾಡಿದ್ದ ಅಸೀಮಾ ತನ್ನನ್ನು ರಕ್ಷಿಸುವಂತೆ ಹಾಗೂ ತನಗೆ ಮಾತೃದೇಶಕ್ಕೆ ಮರಳಲು ವ್ಯವಸ್ಥೆ ಮಾಡಬೇಕೆಂದು ಕೋರಿದ್ದಳೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯುವತಿಯ ಕುಟುಂಬದ ಪರವಾಗಿ ತೆಲಂಗಾಣ ಸರಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಆಕೆಯನ್ನು ರಕ್ಷಿಸಿ ಭಾರತಕ್ಕೆ ಮರಳಿಸುವಂತೆ ಕೇಳಿಕೊಂಡಿತ್ತು.
‘‘ಆಕೆಯನ್ನು ಅಲ್ಲಿ ಕೋಣೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆಗೈಯ್ಯಲಾಗುತ್ತಿತ್ತು. ಆಕೆಗೆ ಆಹಾರ ನೀಡುತ್ತಿರಲಿಲ್ಲ’’ ಎಂದು ಅಸಿಮಾ ಕುಟುಂಬ ಸದಸ್ಯರು ಹೇಳುತ್ತಾರೆ.
ಆಕೆಯ ಸಾವಿನ ಕುರಿತ ಹೆಚ್ಚಿನ ಮಾಹಿತಿ ಕೋರಿ ತೆಲಂಗಾಣ ಪೊಲೀಸರು ಸೌದಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ‘‘ಆಕೆ ಅಲ್ಲಿಗೆ ಹೋಗಿ ನಾಲ್ಕು ತಿಂಗಳುಗಳಾದ ನಂತರ ಆಕೆಗೆ ಆರೋಗ್ಯ ಸಮಸ್ಯೆಗಳು ಎದುರಾದವು. ಸೌದಿ ಕಾನ್ಸುಲೇಟ್ ಗೆ ನಾವೀಗಾಗಲೇ ಪತ್ರ ಬರೆದಿದ್ದೇವೆ’’ಎಂದು ಪೊಲೀಸ್ ನಿರೀಕ್ಷಕ ರಮೇಶ್ ಹೇಳಿದ್ದಾರೆ.