ಬಿಸಿಲ ಝಳ, ನೀರಿಗೆ ಬರ, ಕಾರ್ಕಳವೂ ಹೊರತಲ್ಲ
ಕಾರ್ಕಳ, ಮೇ 9:ರಾಜ್ಯದೆಲ್ಲೆಡೆ ತೀವ್ರ ಜಲಕ್ಷಾಮದ ಕೂಗು ಕೇಳಿಸುತ್ತಿದೆ. ಎಂದೂ ನೀರಿನ ಬರ ಕಾಣದ ಕರಾವಳಿ ಜಿಲ್ಲೆಯ ಪಶ್ಚಿಮ ಘಟ್ಟದಂಚಿನ ಕಾರ್ಕಳ ತಾಲೂಕಿನಲ್ಲಿ ಕೂಡಾ ಈ ಬಾರಿ ಬರದ ದವಡೆಗೆ ಸಿಕ್ಕ ಅನುಭವವಾಗಿದೆ.
ನೀರಿನ ಬರ ಬಿಸಿಲ ಝಳಕ್ಕೆ ತಾಲೂಕಿನ ಮಂದಿ ಈಗ ಸಂಕಟಪಡುತ್ತಿದ್ದಾರೆ. ತಾಲೂಕಿನ ಅನೇಕ ಕಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದ್ದು ಇನ್ನು ಕೃಷಿ ತೋಟಗಳಿಗೆ ನೀರು ಹಾಯಿಸುವ ಮಾತು ದೂರವೇ ಸರಿ.
ಸೋಮೇಶ್ವರ, ಆಗುಂಬೆ ಕಾಡುಗಳನ್ನು ಚಾರ್ಮಾಡಿ ಘಾಟಿ ಕಾಡುಗಳಿಗೆ ಜೋಡಿಸುವ ರಾಜ್ಯ ಹೆದ್ದಾರಿ ಎಡಭಾಗದ ಪಶ್ಚಿಮ ಘಟ್ಟದ ಹಸಿರು ತಪ್ಪಲಲ್ಲಿ ಕೂಡಾ ನೀರಿನ ಒರತೆ ನಿಧಾನಕ್ಕೆ ಆರಿ ಹೋಗುತ್ತಿದೆ ಎಂದರೆ ಅಚ್ಚರಿ ಪಡುವ ವಿಷಯವೇ ಅಲ್ಲ ಎಂದು ತಪ್ಪಲು ಗ್ರಾಮದಲ್ಲಿನ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಿಯಾರು ಹೊಳೆ, ಸಾಣೂರಿನ ಶಾಂಭವಿ, ತೆಳ್ಳಾರಿನ ದೊಡ್ಡ ಹೊಳೆಗಳಲ್ಲೆಲ್ಲ ನೀರಿನ ಹರಿವು ನಿಂತು ಹೋಗಿದ್ದು ಗುಂಡಿಗಳಲ್ಲಿ ನಿಂತ ಒರತೆ ನೀರು ಬಿಟ್ಟರೆ ಮಿಕ್ಕೆಲ್ಲ ಕಡೆ ನೀರಿನ ಹನಿಯೂ ಕಾಣದೆ ಪರಿಸ್ಥಿತಿಯ ಗಂಭೀರತೆ ತೋರಿದೆ.
ತಾಲೂಕಿನ ಕೆರೆಕಟ್ಟೆ, ತೋಡುಗಳು ನೀರಿಲ್ಲದೆ ಸಂಪೂರ್ಣವಾಗಿ ಬರಿದಾಗಿದ್ದು ಕೃಷಿ ತೋಟಗಳಿಗೆ ನೀರು ಹಾಯಿಸುವ ಕೆಲಸ ಈಗ ನಿಂತು ಹೋಗಿದೆ. ಇಡೀ ದಿನಕ್ಕೆ ಅರ್ಧಗಂಟೆ ನೀರೆತ್ತಲು ಸಿಕ್ಕಿದರೂ ಅದು ದೊಡ್ಡ ಪುಣ್ಯ ಎನ್ನುವ ಪರಿಸ್ಥಿತಿ ಕಂಡು ಬಂದಿದೆ. ನೀರಿನ ಅಭಾವದಿಂದ ಅಡಿಕೆ ತೋಟಗಳು ಒಣಗಿ ಹಾಳಾಗುತ್ತಿರುವುದು ತೋಟಗಾರರಲ್ಲಿ ಆತಂಕದ ಪರಿಸ್ಥಿತಿ ಉಂಟು ಮಾಡಿದೆ. ಕುಡಿಯುವ ನೀರಿಗಾಗಿ ಜನರು ಕಿಲೋಮೀಟರ್ ದೂರದಿಂದ ಕೊಡಗಳಲ್ಲಿ ನೀರು ಹೊತ್ತು ತರುವುದು, ಸೈಕಲ್‌ಗಳಲ್ಲಿ ಕೊಡಪಾನಗಳನ್ನು ಕಟ್ಟಿ ನೀರು ತರುವ ದೃಶ್ಯ ಸಾಮಾನ್ಯವಾಗಿದೆ. ಕೂಲಿ ಕೆಲಸಕ್ಕೆ ಹೋಗುವ ಮುನ್ನ ನೀರು ತುಂಬುವ ಹೆಚ್ಚುವರಿ ಕೆಲಸ ಬಡವರ್ಗದ ಜನರ ದೈನಂದಿನ ಚಟುವಟಿಕೆಯಾಗಿ ಮಾರ್ಪಟಿದೆ. ಸಿರಿವಂತರಂತೂ ನೀರಿನ ಟ್ಯಾಂಕರ್‌ಗಳಿಗೆ ಮೊರೆ ಹೋದರೆ ನೀರು ತಂದು ಕೊಡುವ ಟ್ಯಾಂಕರ್‌ಗಳಿಗೂ ನೀರು ಸಿಗದೆ ಬರದ ಬಿಸಿ ತಟ್ಟುತ್ತಿದೆ. ಒಂದೆಡೆ ಜನರು ನೀರಿಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದರೆ ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳಲಿಕ್ಕಾಗಿ ಯಥೇಚ್ಛ ನೀರಿರುವ ಬೋರ್‌ವೆಲ್‌ಗಳ ಮನೆ ಮುಂದೆ ಕಾಯುತ್ತಿರುವುದನ್ನು ಕಾಣಬಹುದು.
ಮಳೆಯಾಗದಿದ್ದರೆ ಪರಿಸ್ಥಿತಿ ಗಂಭೀರ
ಯುಗಾದಿ ಬಳಿಕ ಎಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾಗುವುದು ಇಲ್ಲಿ ವಾಡಿಕೆ. ಆದರೆ ಈ ಬಾರಿ ಮಳೆಯಾಗಿಲ್ಲ. ಹಗಲಿನ ಬಿಸಿಲ ಝಳ ಕಂಡರೆ ಸದ್ಯಕ್ಕೆ ಮಳೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಒಂದು ವೇಳೆ ಇನ್ನೂ 10 ದಿನ ಮಳೆ ಆಗದೆ ಹೋದರೆ ತಾಲೂಕಿನೆಲ್ಲೆಡೆ ಹನಿ ನೀರಿಗೂ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಒಂದೇ ಸಮ ಏರುತ್ತಿರುವ ತಾಪಮಾನ
ನೀರಿನ ತತ್ಪಾರ ಒಂದೆಡೆಯಾದರೆ ದಿನಂಪ್ರತಿ ಏರುತ್ತಿರುವ ತಾಪಮಾನ ಜನರ ನಿದ್ದೆಗೆಡಿಸಿದೆ. ತಾಪಮಾನ ನಿಯಂತ್ರಣದಲ್ಲಿರುತ್ತಿದ್ದರೆ ಮಳೆಯಾಗುವುದು ಒಂದೆರಡು ವಾರ ತಡವಾದರೂ ನಡೆಯುತ್ತಿತ್ತು. ಆದರೆ ತಾಪಮಾನದಲ್ಲಿ ತೀವ್ರ ಏರಿಕೆ ಆಗುತ್ತಿರುವುದು ಮಣ್ಣಿನಲ್ಲಿರುವ ತೇವಾಂಶವನ್ನು ಆರಿಸುತ್ತಿದ್ದು ಕೆರೆಬಾವಿಗಳಲ್ಲಿ ಕುಡಿವ ನೀರಿನ ಅಲ್ಪಸ್ವಲ್ಪ ಲಭ್ಯತೆಯ ಮೇಲೂ ಪರಿಣಾಮ ಬೀರಿದೆ.
ಮುಂಡ್ಲಿ ಜಲಾಶಯ ಖಾಲಿ ಖಾಲಿ
ಕಾರ್ಕಳ ನಗರದಲ್ಲಿ ಕುಡಿಯುವ ನೀರಿಗೆ ಬರ ಕಾರ್ಕಳ ನಗರಕ್ಕೆ ನೀರು ಹಾಯಿಸುವ ಕಾರ್ಕಳ ತೆಳ್ಳಾರು ಗ್ರಾಮದಲ್ಲಿನ ಮುಂಡ್ಲಿ ಹೊಳೆ ಜಲಾಶಯ ಬತ್ತಿ ಹೋಗುವ ಲಕ್ಷಣ ಕಾಣುತ್ತಿದ್ದು ಬಹುತೇಕ ನೀರು ನಿಂತು ಹೋಗುವ ಹಂತದಲ್ಲಿದೆ.
ಲಕ್ಷ ಜನಸಂಖ್ಯೆ ಇರುವ ಕಾರ್ಕಳ ನಗರಕ್ಕೆ ನೀರುಣಿಸುವ ರಕ್ಷಕ ಜಲಾಶಯ ಇದಾಗಿದ್ದು, ಇದು ಬತ್ತಿ ಹೋದಲ್ಲಿ ಕಾರ್ಕಳ ನಗರದ ಜನ ನೀರಿಲ್ಲದೆ ತೀವ್ರ ಬವಣೆ ಅನುಭವಿಸುವುದು ಗ್ಯಾರಂಟಿ. ಕಾರ್ಕಳ ನಗರದ 23 ವಾರ್ಡ್‌ಗಳ ಪೈಕಿ ಎತ್ತರ ಸ್ಥಳಗಳಾದ ಬಂಗ್ಲೆಗುಡ್ಡೆ, ಜರಿಗುಡ್ಡೆ, ಕಾಬೆಟ್ಟು, ಹವಾಲ್ದಾರ್ ಬೆಟ್ಟು, ಪತ್ತೊಂಜಿಕಟ್ಟೆ, ಬೋರ್‌ಗುಡ್ಡೆ ಮುಂತಾದ ವಾರ್ಡುಗಳಲ್ಲಿ ಈಗಲೇ ನೀರಿನ ಹಾಹಾಕಾರ ತಲೆದೋರಿದೆ. ಕಾರ್ಕಳದಲ್ಲಿ 3 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದ್ದು ಕುಡಿವ ನೀರಿಗಾಗಿ ಪರದಾಟ ಕಂಡು ಬಂದಿದೆ.
3 ದಿನಕ್ಕೊಮ್ಮೆ ಸರಬರಾಜಾಗುತ್ತಿರುವ ನೀರನ್ನು ಶ್ರೀಮಂತರು, ಅನುಕೂಲಸ್ಥರು ತಮ್ಮ ಸ್ಟೋರೆಜ್ ವ್ಯವಸ್ಥೆಯಲ್ಲಿ ತುಂಬಿಕೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದರೂ, ಬಡವರು ತಮಗೆ ಬೇಕಾದ ನೀರನ್ನು ಹಿಡಿದಿಟ್ಟುಕೊಳ್ಳಲು ಶೇಖರಣಾ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.
ವಾಣಿಜ್ಯ ಸಂಕೀರ್ಣ ವಸತಿಗೃಹ, ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಸಂಗ್ರಹಣ ವ್ಯವಸ್ಥೆ ಇರುವುದರಿಂದ ಸರಬರಾಜಾಗುವ ನೀರು ದೊಡ್ಡ ಪ್ರಮಾಣದಲ್ಲಿ ಕೆಲವೇ ಮಂದಿಯ ಪಾಲಾಗುತ್ತಿದೆ. ಮಾತ್ರವಲ್ಲ ನೀರನ್ನು ಬೇಕಾಬಿಟ್ಟಿ ಬಳಸುತ್ತಿದ್ದು ಅನೇಕರು ತಮ್ಮ ಹಿತ್ತಲಿನ ಕೃಷಿ ಕಾರ್ಯಗಳ ಬಳಕೆಗೂ ಬಳಸಿದ ಕಾರಣ ಬಡವರು ಕುಡಿಯಲೂ ನೀರಿನ ವ್ಯವಸ್ಥೆ ಇಲ್ಲದೆ ಸಂಕಟ ಪಡುವಂತಾಗಿದೆ.
ಬತ್ತಿಹೋದ ಆನೆಕೆರೆ
ಬೇಸಿಗೆಯಲ್ಲಿ ಕಾರ್ಕಳ ಪರಿಸರದ ಅಂತರ್ಜಲ ಕಾಪಿಡುವ ನಿಟ್ಟಿನಲ್ಲಿ ಸಹಕಾರಿಯಾಗಿರುತ್ತಿದ್ದ ಭೈರವ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಆನೆಕೆರೆ ಈ ಬಾರಿ ಸಂಪೂರ್ಣ ಬತ್ತಿ ಹೋಗಿದ್ದು ಆನೆಕೆರೆ ಇತಿಹಾಸದಲ್ಲೇ ಈವರೆಗೆ ನೀರು ಸಂಪೂರ್ಣ ಬತ್ತಿ ಹೋದ ನಿದರ್ಶನವಿಲ್ಲ. 28 ಎಕ್ರೆ ವಿಸ್ತೀರ್ಣದ ಈ ವಿಶಾಲ ಕೆರೆಯಲ್ಲಿ ನೀರು ಸಂಗ್ರಹವಿಲ್ಲ. ಈ ಕಾರಣದಿಂದ ಆನೆಕೆರೆ ಪರಿಸರದ ನಾಲ್ಕಾರು ವಾರ್ಡ್‌ಗಳಲ್ಲಿ ಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು ಆ ಬಾಗದ ಜನರಿಗೆ ತೊಂದರೆ ಎದುರಾಗಿದೆ. ಆನೆಕೆರೆ, ಹಿರಿಯಂಗಡಿ, ಕುಂಟಲ್ಪಾಡಿವರೆಗೂ ಆನೆಕೆರೆಯ ಒಸರು ನೀರಿನ ಲ್ಯತೆಯ ಮೇಲೆ ಪರಿಣಾಮ ಬೀರಿದೆ. ಇದೇ ಕೆರೆಯನ್ನು ಆಶ್ರಯಿಸಿರುವ ಪಕ್ಷಿ ಸಂಕುಲ ನೀರಿಲ್ಲದೆ ಆಪತ್ತಿನಲ್ಲಿದ್ದು ಮೀನು ಮತ್ತು ಜಲಚರಗಳು ಸಂಪೂರ್ಣವಾಗಿ ಸಮಾಧಿಯಾಗಿದೆ.ರಾಮಸಮುದ್ರದಲ್ಲಿ ಒಂದಷ್ಟು ನೀರಿನ ಸಂಗ್ರಹ ಇದ್ದರೂ ಈ ನೀರನ್ನು ಶುದ್ಧೀಕರಿಸದ ಹೊರತು ಕುಡಿಯಲು ಬಳಕೆ ಮಾಡುವಂತಿಲ್ಲ.
ಪುರಸಭಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ನಿರೀಕ್ಷೆ :
ಕಾರ್ಕಳ ನಗರಕ್ಕೆ ಪ್ರತಿದಿನ 10 ಲಕ್ಷ ಗ್ಯಾಲನ್ ನೀರು ಸರಬರಾಜಾಗುತ್ತಿದೆ. ಈ ಪೈಕಿ ದೊಡ್ಡ ಪ್ರಮಾಣದ ನೀರು ಕಟ್ಟಡ ಕಾಮಗಾರಿಗಳಿಗೆ, ಅಪಾರ್ಟುಮೆಂಟುಗಳಿಗೆ ಹೋಟೆಲ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತಿರುವುದು ಗೊತ್ತಾಗಿದೆ. ಅನೇಕ ಮಂದಿ ಕೃಷಿ ತೋಟಗಳಿಗೂ, ಕುಡಿಯುವ ನೀರನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಅನೇಕರು ನೀರು ಲಭ್ಯವಿರುವ ಸಮಯದಲ್ಲಿ ಪ್ರತ್ಯೇಕ ಸಂಗ್ರಹ ವ್ಯವಸ್ಥೆಗೆ ನೀರು ಹರಿಸಿ ಇಟ್ಟುಕೊಳ್ಳುವುದಲ್ಲದೆ ಕುಡಿಯಲು ಅನಧಿಕೃತವಾಗಿಯೂ ನೀರನ್ನು ಎತ್ತಿಕೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ನೀರಿನ ಬಳಕೆಯ ಮೇಲೆ ಪುರಸಭಾಡಳಿತ ಕಟ್ಟುನಿಟ್ಟಿನ ನಿಗಾ ವಹಿಸುವುದರ ಜೊತೆ ವಿವಿಧ ರೀತಿಯಲ್ಲಿ ನೀರು ಪೋಲಾಗುತ್ತಿರುವುದನ್ನು ತಡೆಯಬೇಕಿದೆ. ಮೂರು ದಿನಕ್ಕೊಮ್ಮೆ ನೀರು ಹರಿಸುವ ಬದಲು ಅದನ್ನು ಕನಿಷ್ಠ ಎರಡು ದಿನಕ್ಕೊಮ್ಮೆಯಂತೆ ಹಂಚಿ ಕೊಡುವ ಮೂಲಕ ಸೂಕ್ತ ರೀತಿಯಲ್ಲಿ ನೀರಿನ ಲಭ್ಯತೆಗೆ ಕ್ರಮ ಕೈಗೊಳ್ಳಬೇಕೆಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.