ಕಾಬೆಟ್ಟು ಬಳಿ ಟೂರಿಸ್ಟ್ ಬಸ್-ಪಿಕಪ್ ಢಿಕ್ಕಿ: ಇಬ್ಬರಿಗೆ ಗಾಯ
ಕಾರ್ಕಳ, ಮೇ 9: ಟೂರಿಸ್ಟ್ ಬಸ್ಸೊಂದು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಕಾಬೆಟ್ಟು ರಾಜ್ಯ ಹೆದ್ದಾರಿ ಬಳಿ ಸೋಮವಾರ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಟೂರಿಸ್ಟ್ ಬಸ್ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಕಾಬೆಟ್ಟು ವಿ.ಕೆ.ಫ್ಯಾಕ್ಟರಿ ಬಳಿ ಮೋರಿ ಕಾಮಗಾರಿ ಆಮೆ ನಡಿಗೆಯಿಂದ ಸಾಗುತ್ತಿರುವುದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈ ಅರ್ಧಂಬರ್ಧ ಮೋರಿ ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ 15ಕ್ಕೂ ಮಿಕ್ಕಿ ಅಪಘಾತಗಳು ನಡೆದಿದ್ದು, ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎನ್ನುವ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಇಲ್ಲಿರುವ ಅಪಾಯದ ಕುರಿತಂತೆ ಸೂಕ್ತ ನಾಮಪಲಕವನ್ನು ಹಾಕದೆ, ರಸ್ತೆಯನ್ನು ಅರ್ಧಕ್ಕೆ ಕತ್ತರಿಸಿರುವುದು ಈ ಅಪಘಾತಗಳಿಗೆ ಇನ್ನೊಂದು ಕಾರಣ. ಅತಿ ಹೆಚ್ಚು ಟೂರಿಸ್ಟ್ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕಾಮಗಾರಿಯ ಕುರಿತು ತಿಳಿಯದೆ, ಅಪಘಾತಕ್ಕೀಡಾಗುತ್ತಿದ್ದಾರೆ. ರಾತ್ರಿಯ ವೇಳೆಯಲ್ಲಿ ಸೂಕ್ತ ವಿದ್ಯುತ್‌ದೀಪಗಳಿಲ್ಲದೇ ಇರುವುದರಿಂದ ಅಲ್ಲಿರುವ ಹೊಂಡಗಳು ಚಾಲಕರಿಗೆ ಕಾಣುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.