×
Ad

ಆಧುನಿಕ ಸಮಾಜ ಸಹಜತೆಯನ್ನ ಕಳೆದುಕೊಳ್ಳುತ್ತಿದೆ: ನಾ.ಮೊಗಸಾಲೆ

Update: 2016-05-09 18:36 IST

ಕಾರ್ಕಳ, ಮೇ 9: ಪ್ರಸ್ತುತ ಸಮಾಜವು ಆಧುನಿಕತೆಗೆ ತೆರೆದುಕೊಂಡು ಸಹಜತೆಯನ್ನ ಕಳೆದುಕೊಳ್ಳುತ್ತಿದೆ. ಇಂದಿನ ವಿದ್ಯಾಭ್ಯಾಸ ಕ್ರಮವು ವಿದ್ಯಾರ್ಥಿಗಳಿಂದ ಸಹಜತೆಯನ್ನ ಕಸಿದುಕೊಳ್ಳುತ್ತಿದೆ ಎಂದು ಖ್ಯಾತ ಕನ್ನಡ ಸಾಹಿತ್ಯ ಲೇಖಕ ನಾ.ಮೊಗಸಾಲೆ ಹೇಳಿದ್ದಾರೆ.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೀಬ್ರಾ ಟೆಕ್ನಾಲಜೀಸ್ ಪ್ರಾಯೋಜಕತ್ವದ ಎಫ್.ಎ.ಇ.ಆರ್ ಹಾಗೂ ಜೀಬ್ರಾ ಟೆಕ್ನಾಲಜೀಸ್ ಸಹಯೋಗದಲ್ಲಿ ನಡೆದ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೊಗ್ರಾಮ್ (ಟಿಬಿಆರ್‌ಪಿ) ಗ್ರಾಮೀಣ ಪ್ರದೇಶದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆಧುನಿಕ ಬದುಕಿಗೆ ಒಗ್ಗುತ್ತಿರುವ ನಮ್ಮ ಜೀವನಶೈಲಿಯು ದುಡ್ಡೇ ಪರಮಾಪ್ತ ವಸ್ತು ಎನ್ನುವ ನಿಲುವು ನಮ್ಮ ಮನಸ್ಸಿನಲ್ಲಿ ಬರುವಂತೆ ಮಾಡುತ್ತಿದೆ. ತಾಂತ್ರಿಕತೆಯಲ್ಲಿನ ಒಲವು ನಮ್ಮ ಕೌಟುಂಬಿಕ ಸಂಬಂಧದಿಂದ ದೂರವಾಗುವಂತೆ ಮಾಡುತ್ತಿರುವುದು ದು:ಖಕರ. ದುಡ್ಡಿಗೋಸ್ಕರ ಪರಿಸರ ನಾಶದಂತಹ ಕೆಟ್ಟ ಕೆಲಸ ಮಾಡುತ್ತಿರುವ ಜನರಿಗೆ ಬರವೇ ಪಾಠ ಕಲಿಸುತ್ತಿದ್ದು ಇನ್ನು ನೀರಿಗಾಗಿ ಯುದ್ಧ ನಡೆಯುವ ಕಾಲ ಬಂದರೂ ಆಶ್ಚರ್ಯಪಡಬೇಕಾಗಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ ಎನ್. ಚಿಪ್ಳೂಣ್ಕರ್ ಮಾತನಾಡಿ, ಈ ಬೇಸಿಗೆ ಶಿಬಿರದ ಮೂಲಕ ವಿದ್ಯಾರ್ಥಿಗಳಿಗೆ ಸಿಕ್ಕ ಜ್ಞಾನವನ್ನು ತಮ್ಮ ಶಾಲೆಗಳಿಗೆ ಮರಳಿದ ನಂತರ ಸಹಪಾಠಿಗಳೊಂದಿಗೆ ಹಂಚಿಕೊಂಡು ಅದರ ಉಪಯುಕ್ತತೆ ಹೆಚ್ಚಿಸುವ ಜವಾಬ್ದಾರಿ ಈ ಶಿಬಿರದಲ್ಲಿ ಬಾಗವಹಿಸಿರುವ ವಿದ್ಯಾರ್ಥಿಗಳಿಗಿದೆ ಎಂದರು.

ಜೀಬ್ರಾ ಟೆಕ್ನಾಲಜೀಸ್‌ನ ಜೊಬಿ ಮತ್ತು ತಂಡ ಹಾಗೂ ಉಡುಪಿ ಡಿ.ಐ.ಇ.ಟಿಯ ಹಿರಿಯ ಶಿಕ್ಷಕಿ ಮಂಜುಳಾ ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಜೀಬ್ರಾ ಟೆಕ್ನಾಲಜೀಸ್ ಪ್ರಾಯೋಜಕತ್ವದಲ್ಲಿ ನಡೆಸಲಾದ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ (ಟಿಬಿಆರ್‌ಪಿ)ನ ಮುಖ್ಯಸ್ಥ ಡಾ.ನರಸಿಂಹ ಮರಕಳ ವರದಿ ವಾಚಿಸಿದರು. ಶಿಬಿರದ ವಿದ್ಯಾರ್ಥಿ ಅಂಬರೀಶ್ ಸ್ವಾಗತಿಸಿದರು. ಉಪನ್ಯಾಸಕ ಬಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News