ನರೇಂದ್ರ ನಾಯಕ್‌ಗೆ ಜೀವಬೆದರಿಕೆ: ಪೊಲೀಸರಿಗೆ ದೂರು

Update: 2016-05-09 14:17 GMT

ಮಂಗಳೂರು, ಮೇ 9: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕಾಗಿ ಆಗ್ರಹಿಸಿ ಹೋರಾಟ ಮುಂದುವರಿಸಿರುವ ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರಿಗೆ ಜೀವಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ನರೇಂದ್ರ ನಾಯಕ್ ಅವರ ಫೇಸ್‌ಬುಕ್ ಖಾತೆಯ ಮೆಸೆಂಜರ್‌ನಲ್ಲಿ ಕಾಳಿಮಠದ ಅನುಯಾಯಿ ಎಂದು ಹೇಳಿಕೊಂಡ ಶಶಾಂಕ್ ಶೆಣೈ ಎಂಬವರು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ‘‘ನಿನ್ನ ಕೊಳಕು ಕೈಯನ್ನು ಹುಲಿಯ ಬಾಯಿಯೊಳಗೆ ಹಾಕಲು ಯಾಕೆ ಇಷ್ಟಪಡುತ್ತೀಯಾ?’’ ‘‘ನಾಳೆ ಏನಾಗಬಹುದೆಂದು ನೀನು ಊಹಿಸಲು ಸಾಧ್ಯವಿಲ್ಲ’’.‘‘ಇದನ್ನು ನೀನು ಹೇಗಬೇಕಾದರೂ ಅರ್ಥೈಸಿಕೊಳ್ಳು’’ ಎಂಬ ಅರ್ಥ ಬರುವಂತಹ ಮಾನಹಾನಿಕರ ಸಂಭಾಷಣೆಯನ್ನು ನಡೆಸಿದ್ದಾರೆ ಎಂದು ನರೇಂದ್ರ ನಾಯಕ್ ಆರೋಪಿಸಿದ್ದಾರೆ.

ಈ ಬಗ್ಗೆ ನರೇಂದ್ರ ನಾಯಕ್ ಅವರು ಇಂದು ಉರ್ವ ಪೊಲೀಸ್ ಠಾಣೆಗೆ ತೆರಳಿ ಸರ್ಕಲ್ ಇನ್‌ಸ್ಪೆಕ್ಟರ್ ರವೀಶ್ ನಾಯಕ್‌ರಿಗೆ ದೂರು ನೀಡಿದ್ದಾರೆ. ‘‘ತನಗೆ ಹಿಂದಿನಿಂದಲೂ ಜೀವಬೆದರಿಕೆ ಇದ್ದು, ಇದೀಗ ಫೇಸ್‌ಬುಕ್ ಮುಖಾಂತರ ಕಾಶಿಮಠದ ಅನುಯಾಯಿ ಎಂದು ಹೇಳಿಕೊಂಡ ಶಶಾಂಕ್ ಶೆಣೈ ಎಂಬವರು ತನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ನರೇಶ್ ನಾಯಕ್ ತಿಳಿಸಿದ್ದಾರೆ.

ಮಾರ್ಚ್ 21ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಾಳಿಗಾ ಕೊಲೆ ಪ್ರಕರಣದಲ್ಲಿ ನಮೋ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ನರೇಶ್ ಶೆಣೈ ಸಹಿತ ಇತರ ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಇತ್ತೀಚೆಗೆ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಳಿಗಾ ಕೊಲೆಯಾದ ಕಲಾಕುಂಜ ಬಳಿಯಿಂದ ಕಮಿಷನರ್ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಮಿಷನರ್ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ನರೇಂದ್ರ ನಾಯಕ್ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News