×
Ad

‘ನಮೋ ಬ್ರಿಗೇಡ್’ ಸಂಸ್ಥಾಪಕ ನರೇಶ್ ಶೆಣೈ ಪಾತ್ರದ ಬಗ್ಗೆ ಸಾಕ್ಷಾಧಾರ ಲಭ್ಯ: ಕಮಿಷನರ್

Update: 2016-05-09 20:21 IST

ಮಂಗಳೂರು,ಮೇ.9: ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣದಲ್ಲಿ ‘ನಮೋ ಬ್ರಿಗೆಡ್’ ಸಂಸ್ಥಾಪಕ ನರೇಶ್ ಶೆಣೈ, ಶ್ರೀಕಾಂತ್, ಶೈಲೇಶ್ ಅವರು ಭಾಗಿಯಾಗಿರುವ ಬಗ್ಗೆ ಸಾಕ್ಷಧಾರಗಳು ದೊರೆತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಹೇಳಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ವಿನಾಯಕ್ ಬಾಳಿಗ ಹತ್ಯೆ ಪ್ರಕರಣದಲ್ಲಿ ಈ ಮೂವರನ್ನು ಬಂಧಿಸಿದ ನಂತರ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಘ್ನೇಶ್ ಎಂಬ ಆರೋಪಿಯನ್ನು ವಶಕ್ಕೆ ಪಡೆಯಬೇಕಾಗಿದೆ. ಇವರುಗಳು ಘಟನೆಯ ನಂತರ ದೇಶದ ಹಲವೆಡೆ ತಿರುಗಾಡುತ್ತಿದ್ದಾರೆ. ಆರೋಪಿಗಳು ತಮ್ಮ ಅಡಗುತಾಣಗಳನ್ನು ಬದಲಾಯಿಸುತ್ತಲೇ ಇದ್ದಾರೆ. ಇವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೇಳಿದರು.

ಈ ಪ್ರಕರಣದಲ್ಲಿ ಚಾರ್ಜ್‌ಶೀಟ್‌ನ್ನು ಯಾವಾಗ ಬೇಕಾದರೂ ಸಲ್ಲಿಸಲು ಅವಕಾಶವಿದೆ. ಒಮ್ಮೆ ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಅದಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ವದಂತಿಗಳನ್ನು ಹಬ್ಬಿಸಿ ದಾರಿತಪ್ಪಿಸುತ್ತಿದ್ದಾರೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಜೈ ಹತ್ಯೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನ

ಬಿಜೈನಲ್ಲಿ ರವಿವಾರ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಹಣಕಾಸಿನ ವಿಚಾರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದರು.

ಕೇರಳ ಚುನಾವಣೆ: ಗಡಿಯಲ್ಲಿ ಚೆಕ್‌ಪೋಸ್ಟ್

ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿಯಲ್ಲಿ ಚೆಕ್‌ಪೋಸ್ಟ್ ಹಾಕಲಾಗುವುದು ಎಂದು ಅವರು ಹೇಳಿದರು. ಈಗಾಗಲೇ ಇರುವ ಚೆಕ್‌ಪೋಸ್ಟ್‌ನ್ನು ಹೆಚ್ಚಿಸಲಾಗುವುದು. ಕರ್ನಾಟಕದಲ್ಲಿ ನಡೆದ ಜಿಪಂ ಚುನಾವಣೆಯ ಸಂದರ್ಭದಲ್ಲಿ ಹಾಕಲಾದ ಚೆಕ್‌ಪೋಸ್ಟ್‌ನಷ್ಟೆ ಈ ಬಾರಿಯೂ ಹಾಕಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News