ನಿರ್ಮಾಣ ಹಂತದ ಕಟ್ಟಡ ಕುಸಿದು ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಲಯ ಆದೇಶ
ಮಂಗಳೂರು, ಮೇ 9: ಪುತ್ತೂರಿನ ಕಬಕ ವಿದ್ಯಾಪುರ ಪ್ರೌಢಶಾಲೆಯ ನಿರ್ಮಾಣ ಹಂತದಲ್ಲಿದ್ದ ಅಕ್ಷರ ದಾಸೋಹ ಕಟ್ಟಡದ ಲಿಂಟಲ್ ಕುಸಿತದಿಂದ ಗಾಯಗೊಂಡು ಮೃತಪಟ್ಟಿದ್ದ ವಿದ್ಯಾರ್ಥಿ ಶಾರುಖ್ ಖಾನ್ ಕುಟುಂಬಕ್ಕೆ ರಾಜ್ಯ ಸರಕಾರವು 5ಲಕ್ಷ 40 ಸಾವಿರ ಪರಿಹಾರವನ್ನು ಪ್ರಕರಣ ದಾಖಲಾದ ದಿನದಿಂದ ಶೇ. 6ರ ಬಡ್ಡಿದರದಲ್ಲಿ ಮೂರು ತಿಂಗಳ ಒಳಗೆ ನೀಡಬೇಕೆಂದು ಎಸಿಜಿಎಂ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಕೆ.ಬಸವರಾಜು ತೀರ್ಪು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಅಳಕೆ ಮಜಲಿನ ಅಬ್ದುಲ್ ಖಾದರ್ ಹಾಗೂ ತಾಹಿರಾ ಬಾನು ದಂಪತಿಗಳ ಪುತ್ರ ಶಾರುಖ್ ಖಾನ್ ಮಾರ್ಚ್ 4ರಂದು ಪುತ್ತೂರಿನ ಕಬಕ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಕ್ಷರ ದಾಸೋಹ ಕಟ್ಟಡದ ಲಿಂಟಲ್‌ನ ಭಾಗ ಆತನ ಮೇಲೆ ಕುಸಿದು ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದ.
ಪ್ರಕರಣದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸರಕಾರಿ ಶಾಲಾಡಳಿತದ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 5ವರ್ಷಗಳಿಂದ ಪುತ್ತೂರಿನಲ್ಲಿರುವ ಎಸಿಜಿಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 2015ರಲ್ಲಿ ಪ್ರಕರಣವನ್ನು ಮಂಗಳೂರಿನ ನ್ಯಾಯವಾದಿ ಕೆ.ಎಸ್.ಇಬ್ರಾಹೀಂ ಪಡೆದುಕೊಂಡು ಎಸಿಜಿಎಂ ಪುತ್ತೂರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಈ ಬಗ್ಗೆ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಕೆ.ಬಸವರಾಜು, ಈ ಪ್ರಕರಣದಲ್ಲಿ ಕಟ್ಟಡದ ಕಾಂಟ್ರಕ್ಟ್‌ದಾರ ಹಾಗೂ ಕಾಂಟ್ರಾಕ್ಟ್ ನೀಡಿದ ಸಂಸ್ಥೆ ಹಾಗೂ ಸರಕಾರದ ಪ್ರತಿನಿಧಿಗಳು ನಿರ್ಲಕ್ಷವಹಿಸಿರುವುದರ ಪರಿಣಾಮವಾಗಿ ಬಾಲಕ ಸಾವಿಗೀಡಾಗಿದ್ದಾನೆ ಎಂದು ಪರಿಗಣಿಸಿ, ಸಂತ್ರಸ್ತ ಕುಟುಂಬಕ್ಕೆ ಈಗಾಗಲೆ 40ಸಾವಿರ ರೂ. ಪರಿಹಾರ ನೀಡಿದ್ದ ಕಾರಣ ಉಳಿದ 5 ಲಕ್ಷ ರೂ.ನ್ನು ಜಿಲ್ಲಾಧಿಕಾರಿಯ ಮೂಲಕ ನೀಡಲು ಆದೇಶಿಸಿದ್ದಾರೆ.