ಬಸವೇಶ್ವರರ ಆಶಯಗಳು ಮತ್ತಷ್ಟು ಜನರನ್ನು ತಲುಪಬೇಕು: ಡಿಸಿ ಎ.ಬಿ. ಇಬ್ರಾಹೀಂ
ಮಂಗಳೂರು, ಮೇ9: ದ.ಕ ಜಿಲ್ಲಾಡಳಿತ, ದ.ಕ. ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ವೀರಶೈವ ಕ್ಷೇಮಾಭಿವೃದ್ದಿ ಸಂಘ, ಮಂಗಳೂರು ಸಹಯೋಗದಲ್ಲಿ ಇಂದು ನಗರದ ಪುರಭವನದಲ್ಲಿ ನಡೆದ ಬಸವೇಶ್ವರ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ನಗರದ ಬಸವನಗುಡಿಯ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಬಸವೇಶ್ವರರು ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಹೊಸ ಆಯಾಮ ಕೊಟ್ಟವರು. ಬಸವೇಶ್ವರರ ಆಶಯಗಳು ಮತ್ತಷ್ಟು ಜನರಿಗೆ ಪ್ರಸಾರವಾಗಬೇಕು. ನಾವೆಲ್ಲರೂ ಸಮಾನರು ಎಂದು ಎಲ್ಲರಿಗೂ ತಿಳಿಹೇಳಬೇಕಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಬಸವೇಶ್ವರ ಜಯಂತಿಯ ಸಂದೇಶವನ್ನು ಆಕಾಶವಾಣಿ ಮಂಗಳೂರಿನ ಡಾ.ಸದಾನಂದ ಪೆರ್ಲ ನೀಡಿದರು.
ಕಾರ್ಯಕ್ರಮದಲ್ಲಿ ದ.ಕ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಜಾನಪದ ಕಲಾವಿದೆ ಗಿಡಿಗೆರೆ ರಾಮಕ್ಕ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಉಪಸ್ಥಿತರಿದ್ದರು.