ನೀಟ್-1ಕ್ಕೆ ಹಾಜರಾಗದಿದ್ದ ಎಲ್ಲ ವಿದ್ಯಾರ್ಥಿಗಳಿಗೆ ನೀಟ್-2 ಬರೆಯಲು ಅವಕಾಶ:ಸುಪ್ರೀಂ ನಿರ್ಧಾರ
ಹೊಸದಿಲ್ಲಿ,ಮೇ 9: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಗೆ ಸಂಬಂಧಿಸಿದಂತೆ ಸೋಮವಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿರುವ ಸರ್ವೋಚ್ಚ ನ್ಯಾಯಾಲಯವು,ನೀಟ್-1ಕ್ಕೆ ಹಾಜರಾಗಲು ಸಾಧ್ಯವಾಗದಿದ್ದ ಅಭ್ಯರ್ಥಿಗಳಿಗೆ ನೀಟ್-2ಕ್ಕೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಹೇಳಿದೆ.
ನೀಟ್-1ಕ್ಕೆ ಹಾಜರಾಗಿರುವ ಮತ್ತು ಪರೀಕ್ಷೆಗೆ ತಮ್ಮ ಸಿದ್ಧತೆಗಳು ಸರಿಯಾಗಿರಲಿಲ್ಲ ಎಂದು ಆತಂಕವನ್ನು ಹೊಂದಿರುವ ವಿದ್ಯಾರ್ಥಿಗಳು ನೀಟ್-1ರ ತಮ್ಮ ಅಭ್ಯರ್ಥಿತನವನ್ನು ಬಿಟ್ಟುಕೊಟ್ಟರೆ ಅವರಿಗೆ ನೀಟ್-2 ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದೂ ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.
ಅಖಿಲ ಭಾರತ ಸಾಮಾನ್ಯ ಪ್ರವೇಶ ಪರೀಕ್ಷೆಯು ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳ ಹಕ್ಕುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಮಾತ್ರಕ್ಕೆ ಅದನ್ನು ಕೆಟ್ಟದ್ದು ಎಂದು ಹೇಳಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯವು, ನೀಟ್ ಕುರಿತಂತೆ ಕೇಂದ್ರದ ನಿಯಮಾವಳಿಗಳು ಪ್ರತೇಕ ಪರೀಕ್ಷೆಗಳ ಕುರಿತಂತೆ ರಾಜ್ಯದ ಕಾನೂನುಗಳಿಗಿಂತ ಮಿಗಿಲಾಗಿರುವುದರಿಂದ ರಾಜ್ಯಗಳು ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ನೀಟ್ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಅಥವಾ ಮೀಸಲಾತಿ ಸೌಲಭ್ಯಗಳ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು ಅಥವಾ ಸಲ್ಲಿಸಿರಲಿಲ್ಲ ಎನ್ನುವುದನ್ನು ಪರಿಗಣಿಸದೆ ಮೇ 1ರಂದು ನಡೆದ ನೀಟ್-1ಕ್ಕೆ ಹಾಜರಾಗಿರದ ವಿದ್ಯಾರ್ಥಿಗಳಿಗೆ ಮಾತ್ರ ಜ.24ರಂದು ನಡೆಯಲಿರುವ ನೀಟ್-2ಕ್ಕೆ ಹಾಜರಾಗಲು ಅವಕಾಶ ನೀಡುವುದಾಗಿ ಈ ಮೊದಲು ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.