ಜಲ ಮೂಲಗಳ ಪುನಶ್ಚೇತನ, ಅಧ್ಯಯನ ಅವಶ್ಯಕ: ಡಾ.ಟಿ.ವಿ.ರಾಮಚಂದ್ರ
ಮೂಡುಬಿದಿರೆ, ಮೇ 9: ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ನೀರಿನ ಬೇಡಿಕೆ ಹಾಗೂ ಕುಸಿಯುತ್ತಿರುವ ನೀರಿನ ಪ್ರಮಾಣ ಆತಂಕ ಸೃಷ್ಟಿಗೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಮೂಲಗಳ ಬಗ್ಗೆ ಕಾಳಜಿ ತೋರುವುದು ಮಾತ್ರವಲ್ಲ ಅದರ ಪುನಶ್ಚೇತನ ಹಾಗೂ ಸಂಶೋಧನೆಗಳನ್ನು ಮಾಡುವುದು ಇಂದಿನ ಅಗತ್ಯತೆಯಾಗಿದೆ ಎಂದು ಸಂಶೋಧಕ ಡಾ.ಟಿ.ವಿ.ರಾಮಚಂದ್ರ ಹೇಳಿದರು.
ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸ್‌ಸ್ ಬೆಂಗಳೂರು, ಆಳ್ವಾಸ್ ಕಾಲೇಜು ಹಾಗೂ ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಆರು ದಿನಗಳ ಕಾಲ ನಡೆಯಲಿರುವ ‘ಲೇಕ್’ ಸಮಾವೇಶ ಪೂರ್ವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಎತ್ತಿನಹೊಳೆಯಂತಹ ಸೂಕ್ಷ್ಮ ವೈಜ್ಞಾನಿಕ ವಿಷಯಗಳ ಕುರಿತು ಸೂಕ್ತ ಅಧ್ಯಯನವಿಲ್ಲದೇ ಮಾತನಾಡುವ ಜನರಿದ್ದಾರೆ. ನೇತ್ರಾವತಿ ನದಿ ಪ್ರದೇಶದಲ್ಲಿ 24 ಟಿಎಂಸಿ ನೀರು ಲಭ್ಯವಿದೆ ಎಂದು ಸರಕಾರ ಹೇಳುತ್ತದೆ. ಆದರೆ ಅಲ್ಲಿ ಲಭ್ಯವಿರುವುದು ಕೇವಲ 9ಟಿಎಂಸಿ ನೀರು ಮಾತ್ರ ಎಂಬ ಸತ್ಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದರ ಕುರಿತು ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜಲ, ಜಲಮೂಲಗಳ ಸಂರಕ್ಷಣೆ ಹಾಗೂ ಜೌಗು-ಅಳಿವೆ ಪ್ರದೇಶಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಈ ಸಮಾವೇಶದ ಮುಖ್ಯ ಉದ್ದೇಶ. ನಮ್ಮ ಮುಂದಿನ ಪೀಳಿಗೆಗೋಸ್ಕರ ನೀರಿನ ರಕ್ಷಣೆ ಹಾಗೂ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಐಎಸ್‌ಸಿಯ ಸಂಶೋಧಕ ಪ್ರೊ.ಸುಭಾಷ್ ಚಂದ್ರನ್ ಮಾತನಾಡಿ, ಲೇಕ್ ಎಂಬುದು ನೀರಿನ ಮೂಲಗಳನ್ನು ಬಿಂಬಿಸುವ ಪದ. ನಮ್ಮ ಕರ್ನಾಟಕದಲ್ಲಿ ಕರಾವಳಿ ಪ್ರದೇಶವೂ ಸೇರಿದಂತೆ ಬಹಳಷ್ಟು ತೀರ್ಥಪ್ರದೇಶಗಳು, ಜೌಗು ಹಾಗೂ ಅಳಿವೆ ಪ್ರದೇಶಗಳಿವೆ. ಇವೆಲ್ಲ ಸಮೃದ್ಧ ನೀರಿನ ಮೂಲಗಳು. ಆದರೆ ಇಂದು ಮಳೆಗಾಲ ಮುಗಿದ ತಕ್ಷಣವೇ ಈ ಜಲಪ್ರದೇಶಗಳು ನೀರಿಲ್ಲದ ಒಣ ಪ್ರದೇಶಗಳಾಗಿ ಬಿಡುತ್ತವೆ. ಇವುಗಳನ್ನು ಪುನಶ್ಚೇತನಗೊಳಿಸಬೇಕಿದೆ. ಅಂತೆಯೇ ವಿದ್ಯಾರ್ಥಿಗಳನ್ನು ಈ ಕುರಿತು ಸಂಶೋಧನೆಯೆಡೆಗೆ ಸೆಳೆಯಬೇಕಿದೆ ಎಂದರು.
ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರತಿಯೊಂದು ಸಮಾವೇಶ, ಸಮ್ಮೇಳನ ಸಮಾಜದ ಕುರಿತು ಕಾಳಜಿ ಹೊಂದಿರಬೇಕು. ವಿದ್ಯಾರ್ಥಿಗಳೇ ನಮ್ಮ ಸಮಾಜದ ದೊಡ್ಡ ಸಂಪನ್ಮೂಲಗಳು. ಈ ಸಂಪನ್ಮೂಲಗಳನ್ನು ಸರಿಯಾಗಿ ರೂಪುಗೊಳಿಸುವುದಕ್ಕೆಂದೇ ಸಂಶೋಧಕರು, ವಿಜ್ಞಾನಿಗಳು ಇಂತಹ ಉತ್ತಮ ಸಮಾವೇಶಗಳನ್ನು ನಡೆಸುತ್ತಾರೆ. ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಸೂಕ್ಷ್ಮಗಳನ್ನು ಅರಿತುಕೊಂಡು ಸಂಶೋಧನೆಗೆ ಮುಂದಾಗಬೇಕು ಎಂದು ಹೇಳಿದ ಅವರು ಮಂಗಳೂರಿನ ಹಲವಾರು ಶಿಕ್ಷಣಸಂಸ್ಥೆಗಳಲ್ಲಿ ನೀರಿನ ಕೊರತೆಯುಂಟಾಗಿ ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳಿಸಲಾಗುತ್ತಿದೆ. ಆದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 20,000ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರೂ ಅವರಿಗೆ ನೀರಿನ ಕೊರತೆಯಾಗದಂತೆ ನಾವು ಕಾಳಜಿ ವಹಿಸಿದ್ದೇವೆ. ನೀರಿನ ಕೊರತೆಯ ಕಾರಣ ನೀಡಿ ಯಾವ ವಿದ್ಯಾರ್ಥಿಯನ್ನೂ ನಾವು ಮನೆಗೆ ಕಳುಹಿಸಿಲ್ಲ. ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಜಲಸಂರಕ್ಷಣೆಯ ಕುರಿತು ತೋರುತ್ತಿರುವ ಕಾಳಜಿ ಇದಕ್ಕೆ ಕಾರಣ. ಸಾಮಾಜಿಕ ಕಳಕಳಿ ಹೊಂದಿರುವ ಯಾವುದೇ ಸಮಾವೇಶವಿದ್ದರೂ ಅದಕ್ಕೆ ಸಹಕಾರ ನೀಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಿದ್ಧವಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಬಿ. ವಂದಿಸಿದರು. ವಿದ್ಯಾರ್ಥಿನಿ ನಿಶಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿರಿದ್ದರು.