'ಪ್ರಕೃತಿಗೆ ವಿರೋಧವಾಗಿ ನಡೆಯುವುದು ಮಾನವಧರ್ಮ ಅಲ್ಲ’

Update: 2016-05-09 17:45 GMT

ಕೊಣಾಜೆ, ಮೇ 9: ನೇತ್ರಾವತಿ ನದಿಯನ್ನು ತಿರುಗಿಸುವ ದುಸ್ಸಾಹಸಕ್ಕೆ ಸರಕಾರಕ್ಕೆ ಚಾಲನೆ ಕೊಟ್ಟ ಪರಿಣಾಮ ನಮ್ಮ ಭಾಗದಲ್ಲಿ ಒಂದಿನಿತೂ ಮಳೆ ಬಾರದೆ ಬರ ಬರುವ ಮೂಲಕ ಅದರ ನೇರ ಪೆಟ್ಟು ನಮ್ಮ ನಾಡಿಗೆ ಜನತೆಗೆ ಬಿದ್ದಿದ್ದು ಆ ಮೂಲಕ ಪ್ರಕೃತಿಗೆ ವಿರುದ್ಧವಾಗಿ ಹೋಗಬಾರದು ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ಕರಿಂಜೆ ಶ್ರೀ ಲಕ್ಷಿ ್ಮಸತ್ಯನಾರಾಯಣ ವೀರಾಂಜನೇಯ ದೇವಸ್ಥಾನದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ನರಿಂಗಾನ ಗ್ರಾಮದ ಮೊಂಟೆಪದವಿನ ಶಾಂತನಗರದ ಶ್ರೀ ವೀರಮಾರುತಿ ಮಂದಿರ ಹಾಗೂ ವ್ಯಾಯಾಮ ಶಾಲೆಯ ದಶಮಾನೋತ್ಸವದ ಪ್ರಯುಕ್ತ ಶನಿವಾರ ನಡೆದ ಧರ್ಮ ಸಂರಕ್ಷಣೆ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ರಾಜ್ಯ ಸರಕಾರ ಮೂಢನಂಬಿಕೆಯ ಹೆಸರಿನಲ್ಲಿ ಮೂಲ ನಂಬಿಕೆಗೆ ಪೆಟ್ಟು ಕೊಡುವ ಕೆಲಸ ಮಾಡುತ್ತಿದೆ. ದೈವ ದೇವರುಗಳ ಶಕ್ತಿ ಏನು ಎಂಬುದು ಮಾಧ್ಯಮದ ಮೂಲಕವೇ ಜನತೆಯ ಗಮನಕ್ಕೆ ಬರುತ್ತಿದ್ದರೂ ಅದನ್ನು ಸರಕಾರ ಒಪ್ಪಲು ತಯಾರಿಲ್ಲ ಎಂದರು. ಧಾರ್ಮಿಕ ಉಪನ್ಯಾಸಗೈದ ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್, ಯಾವುದೇ ಸಂಘ ಸಂಸ್ಥೆಗಳ ಯಶಸ್ಸಿಗೆ ವೈಚಾರಿಕ ಸಂಘರ್ಷ ಇದ್ದರೆ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದ್ದೇ ಆಗಿದೆ. ಸನಾತನ ಧರ್ಮದ ಮೇಲೆ ಅಸ್ಪೃಶ್ಯತೆ ಎಂಬ ಪಿಡುಗು ಕ್ಯಾನ್ಸರ್‌ನಂತೆ ಕಾಡುತ್ತಿದ್ದು ಯಾವೊಬ್ಬ ಹಿಂದು ಪತಿತನಾಗಿ ಉಳಿಯಬಾರದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕುರ್ನಾಡು ಜಿಪಂ ಕ್ಷೇತ್ರದ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೊಳಿಯಾರುರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳದ ಸಂಚಾಲಕ ಸತ್ಯಪಾಲ ರೈ ಕಡೆಂಜ, ವರ್ಕಾಡಿ-ನರಿಂಗಾನ ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ಸೇವಾ ಸಮಿತಿಯ ಅಧ್ಯಕ್ಷ ಉದಯ ಶಂಕರ್ ಶೆಟ್ಟಿ ಬಲೆತ್ತೋಡು, ಉದ್ಯಮಿಗಳಾದ ಜಗದೀಶ್ ಆಳ್ವ ನಾರ್ಯಗುತ್ತು, ಪ್ರೇಮಾನಂದ ರೈ ನೆತ್ತಿಲಕೋಡಿ ಹಾಗೂ ಗಿರೀಶ್ ಆಳ್ವ ಮೋರ್ಲ ಹಾಗೂ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತವಾಗಿ ವಿತರಿಸಲಾಯಿತು. ಬಳಿಕ ಧರಿತ್ರಿ ಕಲಾವಿದರು ಕುಡ್ಲ ತಂಡದಿಂದ ‘ನನ ತೆಲಿಪುಗ ಹಾಸ್ಯ ಕಾರ್ಯಕ್ರಮ ಪ್ರದರ್ಶನ ನಡೆಯಿತು.

ಇದಕ್ಕೂ ಮುನ್ನ ನಡೆದ ಭಜನಾ ಕಾರ್ಯಕ್ರಮಕ್ಕೆ ಮಂಜನಾಡಿಯ ಸೇಸಪ್ಪ ಪಂಬದ ಚಾಲನೆ ನೀಡಿದರು.

ರಮ್ಯಶ್ರೀ ಶಾಂತನಗರ ಸ್ವಾಗತಿಸಿದರು. ವಿದ್ಯಾ ವಿಜಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಸ್ಥಾಪಕಾಧ್ಯಕ್ಷ ದಾಮೋದರ ಬೆದ್ರೊಳಿಕೆ ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News