ಚುಟುಕು ಸುದ್ದಿಗಳು

Update: 2016-05-09 18:24 GMT

ಸ್ವರ್ಣ ನದಿಯಲ್ಲಿ ಕೊಚ್ಚಿ ಹೋದ ಯುವಕ: ಮತ್ತೋರ್ವನ ರಕ್ಷಣೆ: ಜಮೀನು ಸರ್ವೇಗೆ ಬಂದಿದ್ದ ತಂಡ
ಮಣಿಪಾಲ, ಮೇ 9: ಹೆರ್ಗ ಗ್ರಾಮದ ಕಲ್ಲದಗಡ ಅಳಿವೆ ಬಾಗಿಲು ಎಂಬಲ್ಲಿ ಸೋಮವಾರ ಮಧ್ಯಾಹ್ನ 12:30ರ ಸುಮಾರಿಗೆ ಮಣಿಪಾಲ ವಿವಿಗೆ ಸಂಬಂಧಿಸಿದ ಜಾಗದ ಸರ್ವೇಗೆ ಆಗಮಿಸಿದ್ದ ತಂಡದಲ್ಲಿದ್ದ ಓರ್ವ ಸ್ವರ್ಣ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದು, ಇನ್ನೊಬ್ಬರನ್ನು ರಕ್ಷಿಸಲಾಗಿದೆ. ನೀರುಪಾಲಾದವರನ್ನು ಕಿನ್ನಿಗೋಳಿಯ ಸಂದೀಪ್ ಕುಲಾಲ್ (21) ಎಂದು ಗುರುತಿಸಲಾಗಿದೆ. ಮಣಿಪಾಲ ವಿವಿಯ ಅಸಿಸ್ಟೆಂಟ್ ಎಸ್ಟೇಟ್ ಮೆನೇಜರ್ ಉದಯ ಪೂಜಾರಿ ಅಪಾಯದಿಂದ ಪಾರಾಗಿದ್ದಾರೆ. ಸ್ವರ್ಣ ನದಿಯ ಇನ್ನೊಂದು ಬದಿಯಲ್ಲಿರುವ ಮಣಿಪಾಲ ವಿವಿಗೆ ಸಂಬಂಧಪಟ್ಟ ಜಾಗವನ್ನು ಅಳತೆ ಮಾಡಲು ನಾಲ್ಕು ಜನರ ತಂಡ ಆಗಮಿಸಿತ್ತು. ಅಲ್ಲಿನ ಅಂಬಿಗ ರಜೆಯಲ್ಲಿದ್ದ ಕಾರಣ ದೋಣಿಯನ್ನು ತರಲು ಸಂದೀಪ್ ಕುಲಾಲ್ ಹಾಗೂ ಉದಯ ಪೂಜಾರಿ ನದಿ ನೀರಿನಲ್ಲಿ ನಡೆದುಕೊಂಡೇ ಹೋದರು. ಈ ವೇಳೆ ಸಂದೀಪ್ ಕುಲಾಲ್ ಏಕಾಏಕಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡರು. ಅವರನ್ನು ಉದಯ ಪೂಜಾರಿ ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲೇ ಸಮೀಪವಿದ್ದ ಹೊಗೆ ತೆಗೆಯುವ ಕಾರ್ಮಿಕರು ಉದಯ ಪೂಜಾರಿಯವರನ್ನು ರಕ್ಷಿಸಿ ದಡಕ್ಕೆ ತಂದರು. ಆದರೆ ಸಂದೀಪ್ ನೀರಿನಲ್ಲಿ ಕೊಚ್ಚಿ ಹೋದರು.
ಸಂದೀಪ್‌ಗಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರೂ ಫಲ ಸಿಗಲಿಲ್ಲ. ಸ್ಥಳಕ್ಕೆ ಮಾಹೆಯ ಎಸ್ಟೇಟ್ ಮೆನೇಜರ್ ಜೈವಿಠಲ್, ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನದಿಗೆ ಬಿದ್ದು ಬಾಲಕಿ ಮೃತ್ಯು
ಬ್ರಹ್ಮಾವರ, ಮೇ 9: ಹಾವಂಜೆ ಗ್ರಾಮದ ಮುಗ್ಗೇರಿ ಮುರತಕಡಿ ಎಂಬಲ್ಲಿ ಸ್ವರ್ಣ ನದಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಸೋಮವಾರ ಅಪರಾಹ್ನ 3:50ರ ಸುಮಾರಿಗೆ ನಡೆದಿದೆ
ಮೃತರನ್ನು ಅಂಬ್ರೋಸ್ ಡಿಸೋಜರ ಪುತ್ರಿ ಆಲಿಕಾ (15) ಎಂದು ಗುರುತಿಸಲಾಗಿದೆ. ನದಿ ಸಮೀಪ ಆಟವಾಡುತ್ತಿದ್ದ ಆಲಿಕಾ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಕೆ ಕೊಳಲಗಿರಿ ಮುಟ್ಟಿಕಲ್ಲಿನ ಸರಕಾರಿ ಶಾಲೆಯ 10ನೆ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋದಾಮಿನಲ್ಲಿ ಬೆಂಕಿ: ಭಾರೀ ಪ್ರಮಾಣದ ರದ್ದಿ ಪೇಪರ್ ಭಸ್ಮ
ಪುತ್ತೂರು, ಮೇ 9: ಗೋದಾಮಿನಲ್ಲಿ ಬೆಂಕಿ ಆಕಸ್ಮಿಕದಿಂದ ಭಾರೀ ಪ್ರಮಾಣದ ರದ್ದಿ ಪೇಪರ್ ಸುಟ್ಟು ಭಸ್ಮವಾದ ಘಟನೆ ಪುತ್ತೂರು ನಗರದ ಹೊರ ವಲಯದ ಚಿಕ್ಕಮುಡ್ನೂರು ಗ್ರಾಮದ ಉರಮಾಲು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಊರಮಾಲು ನಿವಾಸಿ ಇಬ್ರಾಹೀಂರಿಗೆ ಸೇರಿದ ಹಳೆ ಗೋದಾಮು ಇದಾಗಿದ್ದು, ಇದರಲ್ಲಿ ರದ್ದಿ ಪೇಪರ್‌ಗಳನ್ನು ತುಂಬಿಸಿಡಲಾಗಿತ್ತು. ಸೋಮವಾರ ಸಂಜೆ ಸುಮಾರು 4 ಗಂಟೆಗೆ ಈ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಅದು ಇಡೀ ಕಟ್ಟಡವನ್ನು ವ್ಯಾಪಿಸಿತು. ಬಿರು ಬಿಸಿಲು ಮತ್ತು ಪೇಪರ್ ರಾಶಿ ಬೆಂಕಿ ವ್ಯಾಪಿಸಲು ನೆರವಾಯಿತು. ಸುದ್ದಿ ತಿಳಿದ ತಕ್ಷಣ ನಗರದ ಅಗ್ನಿಶಾಮಕ ದಳ ಕೇಂದ್ರದಿಂದ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿದವು. ಸುಮಾರು ಎರಡು ಗಂಟೆಗಳ ಕಾಲ ನಡೆಸಿದ ಸತತ ಕಾರ್ಯಾಚರಣೆಯ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಮೇ 14: ಪ್ರಬುದ್ಧ ಭಾರತ ಸ್ವಾಭಿಮಾನ ಸಂಕಲ್ಪ ದಿನ
ಉಡುಪಿ, ಮೇ 9: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ 125ನೆ ಜನ್ಮ ದಿನದ ಪ್ರಯಕ್ತ ‘ಪ್ರಬುದ್ಧ ಭಾರತ ಸ್ವಾಭಿಮಾನ ಸಂಕಲ್ಪ ದಿನ’ವನ್ನು ಮೇ 14ರಂದು ಸಂಜೆ 4ಗಂಟೆಗೆ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸ ಲಾಗಿದೆ.
ಕಾರ್ಯಕ್ರಮವನ್ನು ಬೆಂಗಳೂರಿನ ಪೊಲೀಸ್ ಆಯುಕ್ತ ಡಾ.ಎಸ್. ಸಿದ್ದರಾಜು ಉದ್ಘಾಟಿಸುವರು. ಮುಖ್ಯ ಭಾಷಣಗಾರರಾಗಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಭಾಗವಹಿಸುವರು. ಕುವೆಂಪು ವಿವಿಯ ಕುಲಪತಿ ಪ್ರೊ.ಡಾ. ಜೋಗನ್ ಶಂಕರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ., ಎಸ್ಪಿ ಅಣ್ಣಾಮಲೈ ಮುಖ್ಯ ಅತಿಥಿಗಳಾಗಿರುವರು.

ಅಪರಾಹ್ನ 2ಗಂಟೆಗೆ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಮೆರವಣಿಗೆ ನಡೆಯಲಿದೆ. ಸಭಾಕಾರ್ಯಕ್ರಮದಲ್ಲಿ 500 ವಿದ್ಯಾರ್ಥಿ ಗಳಿಗೆ ನೋಟು ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಎಂದು ಪ್ರಕಟನೆ ತಿಳಿಸಿದೆ.

ಮಾರಕಾಸ್ತ್ರ ಸಹಿತ ವ್ಯಕ್ತಿ ಸೆರೆ
 ಕಾಸರಗೋಡು, ಮೇ 9: ಮನೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಕೋವಿ, ಮದ್ದುಗುಂಡುಗಳ ಸಹಿತ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಆದೂರು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
 ಬಂಧಿತನನ್ನು ಆದೂರು ಏವಂದೂರು ಮೈನಾಡಿ ಯ ಎಂ.ಎಚ್. ಹಮೀದ್ ( 52) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ ಪೊಲೀಸರು ಹಮೀದ್‌ರ ಮನೆಗೆ ದಾಳಿ ನಡೆಸಿ ಮನೆಯೊಳಗೆ ಬಚ್ಚಿಟ್ಟುಕೊಂಡಿದ್ದ 1 ಕೋವಿ, 7 ಮದ್ದು ಗುಂಡು, 11 ಮದ್ದುಗುಂಡು ರೀತಿಯ ಲೋಹದ ಗುಂಡು ಹಾಗೂ ಒಂದು ಖಡ್ಗವನ್ನು ವಶಪಡಿಸಲಾಗಿದೆ. ಇವುಗಳಿಗೆ ಯಾವುದೇ ದಾಖಲೆ ಪತ್ರಗಳಿಲ್ಲವೆಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ
ಬ್ರಹ್ಮಾವರ, ಮೇ 9: ವಿಪರೀತ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಕುಮ್ರಗೋಡು ಗ್ರಾಮದ ಬೆಣ್ಣೆಕುದ್ರು ನಿವಾಸಿ ಐವನ್ ಕ್ವಾರ್ಡಸ್ (50) ಎಂಬವರು ಮಾನಸಿಕ ಖಿನ್ನತೆಗೆಗೊಳಗಾಗಿ ಮೇ 9ರಂದು ಬೆಳಗ್ಗೆ ಮನೆಯ ಬಾತ್‌ರೂಮ್‌ನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ, ಮೇ 9: ಉಜಿರೆ ಗ್ರಾಮದ ಕೋರಿಯಾರ್ ಅರಣ್ಯ ಪ್ರದೇಶದಲ್ಲಿ ಉಜಿರೆಯ ಮುಂಡತ್ತೋಡಿ ನಾಣಿಲ್‌ದಡಿ ನಿವಾಸಿ ನೀಲಯ್ಯ(45) ಎಂಬವರು ಸೋಮವಾರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಇವರು ಮಾನಸಿಕ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೃಷ್ಣ ಮಠದ ಪ್ರವಚನ ಆನ್‌ಲೈನ್‌ನಲ್ಲಿ ಪ್ರಸಾರ
ಉಡುಪಿ, ಮೇ 9: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿನಿತ್ಯ ರಾಜಾಂಗಣ ಹಾಗೂ ಇನ್ನಿತರೆಡೆಗಳಲ್ಲಿ ನಡೆಯುವ ಧಾರ್ಮಿಕ ಪ್ರವಚನಗಳು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳ ವಿಶೇಷ ಮುತುವರ್ಜಿಯಿಂದ ಇದೀಗಆನ್‌ಲೈನ್ ಮೂಲಕ ನೇರ ಪ್ರಸಾರ ಗೊಳ್ಳುತ್ತಿವೆ. ಇದರಿಂದ ಕಂಪ್ಯೂಟರ್ ಮಾತ್ರವಲ್ಲ ಮೊಬೈಲ್‌ನಲ್ಲಿ ಇಂಟರ್ನೆಟ್ ಸಂಪರ್ಕವಿರುವವರು ಸಂಜೆಯ ವೇಳೆ ತಾವು ಕುಳಿತಲ್ಲೇ ಸುಲಭವಾಗಿ ಈ ಪ್ರವಚನಗಳನ್ನು ಆಲಿಸಬಹುದಾಗಿದೆ.ಗೂಗಲ್ ಮೂಲಕ ಜಿಛಿಚ್ಞಜಿ.್ಚಟಞ ತಾಣದಲ್ಲಿ ಪ್ರವಚನದ ನೇರಪ್ರಸಾರ ಸಂಪರ್ಕ ಪಡೆಯಬಹುದು ಎಂದು ಈ ವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಶ್ರೀಗಳ ಆಪ್ತ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಸುನಿಲ್ ಮುಚ್ಚಿನ್ನಾಯ ತಿಳಿಸಿದ್ದಾರೆ.
ಮೇ 1ರಿಂದ ಅದಮಾರು ಶ್ರೀಗಳ ಭಾಗವತ ಪ್ರವಚನದಿಂದ ನೇರಪ್ರಸಾರ ಪ್ರಾರಂಭಗೊಂಡಿದೆ. ಈಗಾಗಲೇ ನಿತ್ಯಬೆಳಗ್ಗೆ ಶ್ರೀಗಳು ನಡೆಸುವ ಶಾಸ್ತ್ರ ಪಾಠಗಳು ನೇರಪ್ರಸಾರಗೊಳುತ್ತಿವೆ. ಮುಂದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈವ್ಯವಸ್ಥೆಗೆ ಅಳವಡಿಸಲು ಪ್ರಯತ್ನಿಸ ಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News