ಸೂರ್ಯನ ಮುಂದೆ ಹಾದುಹೋದ ಬುಧ ಗ್ರಹ

Update: 2016-05-09 18:26 GMT

ಉಡುಪಿ, ಮೇ 9: ಬುಧಗ್ರಹವು ಸೂರ್ಯನ ಎದುರುಗಡೆಯಿಂದ ಹಾದು ಹೋಗುವ ಅಪರೂಪದ ಖಗೋಳ ವಿದ್ಯಮಾನ ‘ಬುಧ ಸಂಕ್ರಮಣ’ ಸೋಮವಾರ ನಡೆದಿದ್ದು, ಉಡುಪಿಯಲ್ಲಿ ಸಂಜೆ 4:40ರಿಂದ ಸೂರ್ಯಾಸ್ತದವರೆಗೆ ಈ ಅಪರೂಪದ ದೃಶ್ಯವನ್ನು ನೋಡುವಂತಾಯಿತು. ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕ ಸಂಘದ ವತಿಯಿಂದ ಪಿಪಿಸಿ ಆವರಣದಲ್ಲಿರುವ ಎಂಬಿಎ ಕಟ್ಟಡದ ತಾರಸಿ ಮೇಲೆ ಟೆಲಿಸ್ಕೋಪ್‌ಮೂಲಕ ವಿದ್ಯಾರ್ಥಿಗಳು ಈ ಅಪರೂಪದ ಬುಧ ಸಂಕ್ರಮಣವನ್ನು ವೀಕ್ಷಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ, ಖಗೋಳ ತಜ್ಞ ಡಾ.ಎ.ಪಿ. ಭಟ್ ಈ ಕುರಿತು ಮಾಹಿತಿ ನೀಡಿದರು.
ಸೂರ್ಯ ಭೂಮಿಯಿಂದ 15 ಕೋಟಿ ಕಿ.ಮೀ. ದೂರದಲ್ಲಿದ್ದರೆ, ಬುಧಗ್ರಹವು 9 ಕೋಟಿ ರೂ. ಕಿ.ಮೀ. ದೂರದಲ್ಲಿದೆ. ಇದರಿಂದ ಸೂರ್ಯನ ಮುಂದೆ ಬುಧ ಹಾದುಹೋಗುವಾಗ ನಮಗೆ ಸಣ್ಣ ಚುಕ್ಕೆಯಂತೆ ಕಾಣುತ್ತದೆ. ಈ ಅಪರೂಪದ ವಿದ್ಯಮಾನವನ್ನು ಒಂದು ಶತಮಾನದಲ್ಲಿ 13 ಬಾರಿ ಕಾಣಬಹುದಾಗಿದೆ. ಇನ್ನು ಮುಂದೆ ಭಾರತೀಯರು ಈ ವಿದ್ಯಮಾನವನ್ನು ನೋಡಲು 2032ರವರೆಗೆ ಕಾಯಬೇಕಾಗಿದೆ. 2019ರಲ್ಲಿ ಇದೇ ರೀತಿಯ ವಿದ್ಯಮಾನ ನಡೆದರೂ ಅದನ್ನು ಭಾರತೀಯರಿಗೆ ನೋಡುವ ಅವಕಾಶ ಇಲ್ಲ ಎಂದು ಡಾ.ಎ.ಪಿ.ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News