ಶಿವಮೊಗ್ಗಕ್ಕೆ ಪ್ರವಾಸ ತೆರಳಿದ್ದ ಇಬ್ಬರು ಯುವಕರು ನಾಪತ್ತೆ
Update: 2016-05-10 19:05 IST
ಬಂಟ್ವಾಳ, ಮೇ 10: ಶಿವಮೊಗ್ಗಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಸ್ನೇಹಿತರಿಬ್ಬರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಸಜಿಪಮೂಡ ಗ್ರಾಮದ ನಡಿಲಗುತ್ತು ನಿವಾಸಿ ಸತೀಶ್ ಮೆಲ್ವಿನ್ ಲೂವಿಸ್(36) ಹಾಗೂ ಅವರ ಸ್ನೇಹಿತ ಗ್ಲಾನ್ ವಿಶಾಲ್ ಡಿಸೋಜ(31) ನಾಪತ್ತೆಯಾದವರು.
ಪ್ರಕರಣದ ಬಗ್ಗೆ ಸತೀಶ್ ಮೆಲ್ವಿನ್‌ರ ಪತ್ನಿ ಪ್ಲೇವಿಯಾ ನಗರ ಠಾಣೆಗೆ ದೂರು ನೀಡಿದ್ದು, ತನ್ನ ಪತಿ ಹಾಗೂ ಅವರ ಸ್ನೇಹಿತನನ್ನು ಪತ್ತೆ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.
ತನ್ನ ಪತಿ ಹಾಗೂ ಅವರ ಸ್ನೇಹಿತ ಮೇ 6ರಂದು ಪ್ರವಾಸಕ್ಕೆಂದು ಶಿವಮೊಗ್ಗಕ್ಕೆ ತೆರಳಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಕರೆ ಮಾಡಿದ ತನ್ನ ಪತಿ ಶಿವಮೊಗ್ಗದಿಂದ ವಾಪಸ್ ಬರುತ್ತಿದ್ದು, ಕೊಪ್ಪದಲ್ಲಿರುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೆ ಇಬ್ಬರೂ ವಾಪಸ್ ಬಂದಿಲ್ಲ ಎಂದವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.