ಅನಧಿಕೃತ ಕಟ್ಟಡ ವಿವಾದ: ಆರೋಪದಲ್ಲಿ ಸತ್ಯಾಂಶವಿಲ್ಲ: ಪ್ರತಿವಾದ
ಮಂಗಳೂರು, ಮೇ 9: ನಗರದ ಬೆಂದೂರ್‌ವೆಲ್‌ನ 3ನೆ ಕ್ರಾಸ್‌ನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವು ಅನಧಿಕೃತ ಕಟ್ಟಡ ಎಂದು ಈ ಸಂಬಂಧ ಅಶ್ರಫ್ ಅಲಿ ಎಂಬವರು ಮಾಡಿರುವ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಹೇಮಾವತಿಯವರ ಪುತ್ರ ತ್ರಿನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
100 ವರ್ಷಗಳ ಕಾಲ ಹಳೆಯದಾದ ಹಾಗೂ ಕುಸಿಯುವ ಹಂತದಲ್ಲಿದ್ದ ನಮ್ಮ ಹಂಚಿನ ಮನೆಯನ್ನು ಪುನರ್ ನಿರ್ಮಾಣ ಮಾಡಿದ್ದು. ಮನೆ ನಿರ್ಮಾಣದ ಸಂದರ್ಭದಲ್ಲಿ ಅಶ್ರಫ್ ಅಲಿ ಅವರ ಆಕ್ಷೇಪ ಇಲ್ಲದಿರುವ ಬಗ್ಗೆ ಅವರ ಒಪ್ಪಿಗೆ ಪಡೆದೇ ಮನೆಯನ್ನು ಪುನರ್ ನಿರ್ಮಿಸಲಾಗಿದೆ. ಇದೀಗ ಅಶ್ರಫ್ ಏಕಾಏಕಿಯಾಗಿ ಪಾಲಿಕೆಗೆ ದೂರು ನೀಡಿರುವುದು ದುರುದ್ದೇಶಪೂರಿತವಾಗಿದೆ ಎಂದು ತ್ರಿನಾಥ್ ಆರೋಪಿಸಿದ್ದಾರೆ.
ಪ್ರಸ್ತುತ ಅಶ್ರಫ್ ಅವರ ಮನೆಯ ಕಟ್ಟಡವು ಅಕ್ರಮವಾಗಿ ನಿರ್ಮಾಣವಾಗಿದ್ದು, ಈ ಬಗ್ಗೆ ಪಾಲಿಕೆಯು ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. ‘‘1976ರ ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಪ್ರಕರಣ 321(1) ಮತ್ತು (2)ರಂತೆ ನಿರ್ಮಿಸಲಾಗಿರುವ ಕಟ್ಟಡವು ಕಾನೂನುಬಾಹಿರವಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸಿ ನೆಲಸಮ ಮಾಡತಕ್ಕದ್ದು. ಮತ್ತು ಈ ಅನಧಿಕೃತ ನಿರ್ಮಾಣದ ಬಗ್ಗೆ ಸಮರ್ಪಕವಾದ ವಿವರಣೆಯನ್ನು ಈ ನೋಟಿಸ್ ತಲುಪಿದ 24 ಗಂಟೆಯೊಳಗೆ ಸಲ್ಲಿಸತಕ್ಕದ್ದು. ನಿಗದಿತ ಸಮಯದೊಳಗೆ ಈ ಅನಧಿಕೃತ ಕಟ್ಟಡವನ್ನು ಕೆಡವಲು ಮತ್ತು ವಿವರಣೆ ನೀಡಲು ತಪ್ಪಿದಲ್ಲಿ ಕಾನೂನು ಉಲ್ಲಂಘನೆ ಮಾಡಿರುವುದನ್ನು ಒಪ್ಪಿರುವಿರಿ ಎಂದು ಪರಿಗಣಿಸಿ ಮೇಲ್ಕಾಣಿಸಿದ ಅಧಿನಿಯಮದ ಪ್ರಕರಣ 321 (3)ರಂತೆ ಈ ತಾತ್ಕಾಲಿಕ ಆದೇಶವನ್ನು ಸ್ವೀಕರಿಸಲಾಗುವುದು. ಮತ್ತು ಪ್ರಕರಣ 462ರಂತೆ ಈ ಅನಧಿಕೃತ ಕಟ್ಟಡವನ್ನು ನಗರಪಾಲಿಕಾ ವತಿಯಿಂದ ತಪ್ಪಿತಸ್ಥರ ಹೊಣೆ, ಜವಾಬ್ದಾರಿ ಮತ್ತು ವೆಚ್ಚದಲ್ಲಿ ನೆಲಸಮ ಮಾಡಲು ಆದೇಶಿಸಲಾಗುವುದು’’ ಎಂದು ಇದೇ ತಿಂಗಳ ಮೇ 3ರಂದು ಮಹಾನಗರ ಪಾಲಿಕೆಯ ಅಧಿಕಾರಿಯು ಅಶ್ರಫ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ ಎಂದು ತ್ರಿನಾಥ್ ತಿಳಿಸಿದರು.
ನನ್ನ ಪಾತ್ರವಿಲ್ಲ: ನವೀನ್ ಡಿಸೋಜ
ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಬಂಧಿಸಿ ಅಶ್ರಫ್ ಅಲಿ ಎಂಬವರು ನನ್ನ ಪಾತ್ರ ಇದೆ ಎಂದು ಹೇಳಿರುವುದು ಸರಿಯಲ್ಲ. ಈ ವಿಷಯದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದು ಕಾರ್ಪೊರೇಟರ್ ನವೀನ್ ಡಿಸೋಜ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ತನ್ನ ವಾರ್ಡ್‌ನಲ್ಲಿ ಮನೆ ಕಟ್ಟಲು ಸಹಾಯ ಕೇಳಿ ಬರುವರಿಗೆ ಸಹಾಯ ಮಾಡಿದ್ದೇನೆ. ಈ ವಿಷಯದಲ್ಲಿ ನಾನು ಯಾರ ಪರವಾಗಲಿ ವಿರೋಧವಾಗಲಿ ವಹಿಸಿಲ್ಲ. ಮನೆಯ ಕಟ್ಟುವ ವಿಷಯದಲ್ಲಿ ಎರಡೂ ಕಡೆಯವರಿಂದ ಗೊಂದಲ ಏರ್ಪಟ್ಟಿದ್ದರಿಂದ ಅದನ್ನು ಶಮನವಾಗುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಿದ್ದೇನೆ. ತಾನೊಬ್ಬನೇ ಮನೆ ಕಟ್ಟಿ ಬುದಕುತ್ತೇನೆ ಎಂಬ ನೀತಿ ಸರಿಯಲ್ಲ. ಇತರರಿಗೂ ಬದುಕಲು ಅವಕಾಶ ಕಲ್ಪಿಸಬೇಕು ಎಂದರು.