ಮೋದಿ ಪದವಿ ವಿವಾದ ಇನ್ನಷ್ಟು ಗೋಜಲು: ಎಂಎ ವಿಷಯಗಳ ಬಗ್ಗೆ ಮಾಜಿ ಪ್ರೊಫೆಸರ್ ಶಂಕೆ

Update: 2016-05-10 16:25 GMT

ಹೊಸದಿಲ್ಲಿ,ಮೇ 10: ಪ್ರಧಾನಿ ನರೇಂದ್ರ ಮೋದಿಯವರ ಪದವಿ ವಿವಾದವು ಮಂಗಳವಾರ ಹೊಸ ತಿರುವೊಂದನ್ನು ಪಡೆದುಕೊಂಡಿದೆ. ಅವರ ಎಂಎ ಪ್ರಮಾಣಪತ್ರಗಳಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳ ಅಧಿಕೃತತೆಯ ಬಗ್ಗೆ ಗುಜರಾತ್ ವಿವಿಯಲ್ಲಿ ಮೋದಿಯವರಿಗೆ ಬೋಧಕರಾಗಿದ್ದ ಮಾಜಿ ಪ್ರೊಫೆಸರ್ ಪಟೇಲ್ ಅವರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಎಂಎ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಮೋದಿ ತನ್ನ ಸ್ನಾತಕೋತ್ತರ ಪದವಿಗಾಗಿ ಗುಜರಾತ್ ವಿವಿಯಲ್ಲಿ ಅಧ್ಯಯನ ಮಾಡಿದ್ದರೆನ್ನಲಾದ ಅವಧಿಯಲ್ಲಿ,ನಿಖರವಾಗಿ 1969-1993ರ ಅವಧಿಯಲ್ಲಿ ತಾನು ಆ ವಿವಿಯಲ್ಲಿ ಬೋಧಕನಾಗಿದ್ದೆ ಎಂದು ಪಟೇಲ್ ಹೇಳಿದ್ದಾರೆ.

‘‘ಎರಡನೇ ವರ್ಷದ ಎಂಎ ಪರೀಕ್ಷೆಯಲ್ಲಿ ಮೋದಿಯವರು ರಾಜಕೀಯ ವಿಜ್ಞಾನದಲ್ಲಿ 64,ಐರೋಪ್ಯ ಮತ್ತು ಸಾಮಾಜಿಕ ರಾಜಕೀಯ ಚಿಂತನೆಯಲ್ಲಿ 62,ಆಧುನಿಕ ಭಾರತ/ರಾಜಕೀಯ ವಿಶ್ಲೇಷಣೆಯಲ್ಲಿ 69 ಮತ್ತು ರಾಜಕೀಯ ಮನೋಶಾಸ್ತ್ರದಲ್ಲಿ 67 ಅಂಕಗಳನ್ನು ಪಡೆದಿರುವುದಾಗಿ ಗುಜರಾತ್ ವಿವಿಯ ಕುಲಪತಿಗಳು ಆಂಗ್ಲ ದೈನಿಕವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ವಿಷಯಗಳ ಹೆಸರುಗಳಲ್ಲಿ ಏನೋ ತಪ್ಪಾಗಿರುವಂತಿದೆ. ನನಗೆ ತಿಳಿದ ಮಟ್ಟಿಗೆ ದ್ವಿತೀಯ ವರ್ಷದ ಆಂತರಿಕ ಅಥವಾ ಬಾಹ್ಯ ವಿದ್ಯಾರ್ಥಿಗಳಿಗೆ ಇಂತಹ ವಿಷಯಗಳಿರಲಿಲ್ಲ. 1969-1993 ಜೂನ್ ಅವಧಿಯಲ್ಲಿ ನಾನು ವಿವಿಯ ರಾಜಕೀಯ ವಿಜ್ಞಾನ ವಿಭಾಗದಲ್ಲಿ ಬೋಧಕನಾಗಿದ್ದೆ’’ಎಂದು ಪಟೇಲ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

‘‘ನರೇಂದ್ರ ಮೋದಿಯವರು ರೆಗ್ಯುಲರ್ ವಿದ್ಯಾರ್ಥಿಯಾಗಿ ರಾಜಕೀಯ ವಿಜ್ಞಾನದಲ್ಲಿ ಎಂಎ ಮೊದಲ ವರ್ಷಕ್ಕೆ ಸೇರಿದ್ದರು. ಆದರೆ ನನ್ನ ತರಗತಿಗೆ ಅವರ ಹಾಜರಾತಿ ಸಾಕಷ್ಟಿರಲಿಲ್ಲ. ಹೀಗಾಗಿ ಅವರು ಪರೀಕ್ಷೆಗೆ ಹಾಜರಾಗಕಲು ನಾನು ಒಪ್ಪಿರಲಿಲ್ಲ, ಬಹುಶಃ ಇತರರು ಒಪ್ಪಿಗೆ ನೀಡಿದ್ದಿರಬಹುದು. ಆದರೆ ಬಾಹ್ಯವಿದ್ಯಾರ್ಥಿಯಾಗಿ ಪರೀಕ್ಷೆಗೆ ಹಾಜರಾಗುವಂತೆ ಮೋದಿಯವರಿಗೆ ಸಲಹೆ ನೀಡಲಾಗಿತ್ತು ’’ಎಂದು ಅವರು ತಿಳಿಸಿದ್ದಾರೆ.

 ಮೋದಿಯವರು ದಿಲ್ಲಿ ವಿವಿಯಿಂದ ಪಡೆದಿದ್ದರು ಎನ್ನಲಾದ ಬಿಎ ಪದವಿಯ ಅಧಿಕೃತತೆಯನ್ನು ಪ್ರಶ್ನಿಸಿ ನಿರಂತರ ಅಭಿಯಾನ ನಡೆಸುತ್ತಿರುವ ಆಪ್‌ನಂತಹ ಮೋದಿ ಟೀಕಾಕಾರರಿಗೆ ಪ್ರೊ.ಪಟೇಲ್ ಬಹಿರಂಗಗೊಳಿಸಿರುವ ವಿಷಯ ಇನ್ನಷ್ಟು ಬಲ ನೀಡಲಿದೆ. ತನ್ಮಧ್ಯೆ ಬಿಜೆಪಿ ಅಧ್ಯಕ್ಷ ಅಮಿತ ಶಾ ಮತ್ತು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿಯವರು ಬಹಿರಂಗಗೊಳಿಸಿರುವ ಮೋದಿಯವರ ಶೈಕ್ಷಣಿಕ ದಾಖಲೆಗಳಲ್ಲಿ ಇನ್ನಷ್ಟು ಅಸಂಗತತೆಗಳನ್ನು ಅಹ್ಮದಾಬಾದ್‌ಲ್ಲಿಯ ಸಾಮಾಜಿಕ ಕಾರ್ಯಕರ್ತರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News