ಸೌದಿ ಸಂಕಟ: ವಲಸಿಗ ವೈದ್ಯರಿಗೆ ಬಂತು ಕುತ್ತು
ಜಿದ್ದಾ, ಮೇ 11: ಸೌದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಲಸಿಗ ವೈದ್ಯರು ಮತ್ತು ಸ್ಪೆಶಲಿಸ್ಟ್ ವೈದ್ಯರ ಉದ್ಯೋಗ/ರೆಸಿಡೆನ್ಸಿ ಪರ್ಮಿಟ್ ಗಳನ್ನು ಇನ್ನು ಮುಂದೆ ನವೀಕರಿಸುವ ಪ್ರಸ್ತಾಪವಿಲ್ಲವೆಂದು ಅಲ್ ಅರೇಬಿಯಾ ವೆಬ್ ಸೈಟ್ ವರದಿ ಮಾಡಿದೆಯೆಂದು ಅರಬ್ ನ್ಯೂಸ್ ತಿಳಿಸಿದೆ.
ನೂತನವಾಗಿ ನೇಮಕಗೊಂಡ ಸೌದಿಯ ಆರೋಗ್ಯ ಸಚಿವರಾದ ತೌಫೀಖ್ ಅಲ್-ರಬಿಯಾ ದೇಶದ ಆರೋಗ್ಯ ಕ್ಷೇತ್ರವನ್ನು ಪುನರ್ ಸಂಘಟಿಸಲು 11 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದ್ದು ಇದರಂಗವಾಗಿ ಮೇಲಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆಯೆನ್ನಲಾಗಿದೆ. ದೇಶದ ಎಲ್ಲಾ ಸರಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಲು ಎಲ್ಲಾ ಪ್ರಕ್ರಿಯೆಗಳನ್ನು ಇಲೆಕ್ಟ್ರಾನೀಕೃತಗೊಳಿಸಲೂ ಸಚಿವರು ಇಂಗಿತ ವ್ಯಕ್ತಪಡಿಸಿದ್ದಾರೆ.
ವಲಸಿಗ ಕನ್ಸಲ್ಟೆಂಟುಗಳೂ ಸೌದಿಯಲ್ಲಿ 15 ವರ್ಷ ಸೇವೆ ಸಲ್ಲಿಸಿದವರಾಗಿದ್ದರೆ ತಮ್ಮ ಉದ್ಯೋಗ/ರೆಸಿಡೆನ್ಸಿ ಪರ್ಮಿಟ್ ಗಳನ್ನು ನವೀಕರಿಸಲು ಅನುಮತಿಸಲಾಗುವುದಿಲ್ಲ. ಇಷ್ಟೇ ಅಲ್ಲದೆ ಈ ಯೋಜನೆಯಂಗವಾಗಿ ವಲಸಿಗ ವೈದ್ಯರಿಗೆ ಆಸ್ಪತ್ರೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳನ್ನು ನೀಡುವಂತಿಲ್ಲವೆನ್ನಲಾಗಿದೆ.
ಈ ವಿಚಾರವನ್ನು ದೃಢೀಕರಿಸಲು ಅರಬ್ ನ್ಯೂಸ್ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಮಾಡಿದ ಯತ್ನಗಳು ವಿಫಲವಾಗಿವೆ.