ಗಲ್ಲಿಗೇರಿದ ಬಾಂಗ್ಲಾ ಜಮಾಅತ್ ನಾಯಕ ನಿಝಾಮಿ
ಢಾಕಾ, ಮೇ 11 : ಬಾಂಗ್ಲಾದೇಶದ ಜಮಾಅತ್- ಇ- ಇಸ್ಲಾಮಿ ಪಾರ್ಟಿ ನಾಯಕ ಮೊತಿಯುರ್ ರಹಮಾನ್ ನಿಝಾಮಿ ಅವರನ್ನು 1971ರ ಪಾಕಿಸ್ತಾನದ ಜತೆ ಯುದ್ಧ ಸಂದರ್ಭದಲ್ಲಿ ನಡೆಸಿದ ಅಪರಾಧಗಳಿಗೆ ಬುಧವಾರದಂದು ಗಲ್ಲಿಗೇರಿಸಲಾಯಿತೆಂದು ದೇಶದ ಕಾನೂನು ಸಚಿವ ಅನಿಸುಲ್ ಹಖ್ ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿಝಾಮಿಯವರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರನ್ನು ಢಾಕಾ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ವಿಶೇಷ ಟ್ರಿಬ್ಯೂನಲ್ ಒಂದು ಅವರನ್ನು ಯುದ್ಧ ಕಾಲದಲ್ಲಿ ನರ ಹತ್ಯೆ, ಅತ್ಯಾಚಾರ ಹಾಗೂ ಉನ್ನತ ಬುದ್ಧಿಜೀವಿಗಳ ಹತ್ಯೆಗೆ ಕಾರಣವಾದ ಆರೋಪದಲ್ಲಿ ವಿಚಾರಣೆ ನಡೆಸಿತ್ತು.
ಮಾಜಿ ಸಂಸದರೂ ಖಲೀದಾ ಜಿಯಾ ಅವರ ಆಡಳಿತದಲ್ಲಿ ಸಚಿವರೂ ಆಗಿದ್ದ 73 ವರ್ಷದ ನಿಝಾಮಿ ಅವರಿಗೆ 2014 ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಘೋಷಿಸಿತ್ತು.
ಅವರನ್ನು ಗಲ್ಲಿಗೇರಿಸಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ನೂರಾರು ಜನರು ಢಾಕಾದ ರಸ್ತೆಗಳಲ್ಲಿ ತಮ್ಮ ಸಂತಸ ವ್ಯಕ್ತಪಡಿಸಿದರು. ‘‘ಕೊನೆಗೂ ನಮಗೆ ನ್ಯಾಯ ಸಿಕ್ಕಿದೆ,’’ಎಂದು ಹಿರಿಯ ಯೋಧ ಅಕ್ರಮ್ ಹುಸೈನ್ ಹೇಳಿದ್ದಾರೆ.
ಆದರೆ ನಿಝಾಮ್ ಅವರಿಗೆ ನೀಡಲಾದ ಗಲ್ಲು ಶಿಕ್ಷೆ ವಿಪಕ್ಷ ರಾಜಕಾರಣಿಗಳಿಂದ ಹಾಗೂ ಜಮಾಅತೆ ಇಸ್ಲಾಮಿ ಸಂಘಟನೆಯಿಂದ ಟೀಕೆಗೆ ಗುರಿಯಾಗಿದ್ದು ಶೇಖ್ ಹಸೀನಾ ಅವರ ರಾಜಕೀಯ ಎದುರಾಳಿಗಳನ್ನು ಶಿಕ್ಷಿಸಲಾಗುತ್ತಿದೆಯೆಂದು ಅವರು ಆರೋಪಿಸಿದರು. ಯುದ್ಧಾಪರಾಧ ಪ್ರಕರಣಗಳ ತನಿಖೆಗೆ ಶೇಖ್ ಹಸೀನಾ 2010ರಲ್ಲಿ ಟ್ರಿಬ್ಯೂನಲ್ ಸ್ಥಾಪಿಸಿದ್ದರು.
ನಿಝಾಮಿಯವರನ್ನು ಗಲ್ಲಿಗೇರಿಸಿರುವುದನ್ನು ಪ್ರತಿಭಟಿಸಿ ಜಮಾಅತೆ ಇಸ್ಲಾಮಿ ದೇಶದಾದ್ಯಂತ ಇಂದು ಮುಷ್ಕರಕ್ಕೆ ಕರೆ ನೀಡಿದೆಯಲ್ಲದೆ ನಿಝಾಮಿಯನ್ನು ಹುತಾತ್ಮನೆಂದು ಬಣ್ಣಿಸಿದೆ.
ರಾಜಧಾನಿ ಢಾಕಾ ಹಾಗೂ ಇತರ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಸುರಕ್ಷಾ ಪಡೆಗಳನ್ನು ನೇಮಿಸಲಾಗಿದ್ದು ಅಹಿತಕರ ಘಟನೆಗಳನ್ನು ತಡೆಯಲು ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.
ಸರಕಾರದ ಪ್ರಕಾರ 1971ರ ಯುದ್ಧ ಸಂದರ್ಭ 30 ಲಕ್ಷ ಜನರು ಕೊಲ್ಲಲ್ಪಟ್ಟಿದ್ದರೆ, ಸಾವಿರಾರು ಮಹಿಳೆಯರು ಅತ್ಯಾಚಾರದ ಬಲಿಪಶುಗಳಾಗಿದ್ದರು, ಜಮಾಅತೆ ಇಸ್ಲಾಮಿಯಂತಹ ಕೆಲವು ಸಂಘಟನೆಗಳು ಆಗ ಪಶ್ಚಿಮ ಪಾಕಿಸ್ತಾನವೆಂದು ಕರೆಯಲ್ಪಡುತ್ತಿದ್ದ ಈಗಿನ ಪಾಕಿಸ್ತಾನದಿಂದ ಬೇರೆಯಾಗುವುದನ್ನು ವಿರೋಧಿಸಿದ್ದರು.
ಯುದ್ಧಾಪರಾಧ ಪ್ರಕರಣಗಳ ತನಿಖೆ ನಡೆಸುತ್ತಿರುವ ಟ್ರಿಬ್ಯೂನಲ್ 2013ರಿಂದ ನಾಲ್ಕು ಜಮಾಅತೆ ಇಸ್ಲಾಮಿ ನಾಯಕರು ಸೇರಿದಂತೆ ಐದು ಮಂದಿ ವಿಪಕ್ಷದ ರಾಜಕಾರಣಿಗಳನ್ನು ಗಲ್ಲಿಗೇರಿಸಿದೆ.